ಒಂದು ಕಾಲದಲ್ಲಿ ಕುಟುಂಬಕಷ್ಟೇ ಅನಿವಾರ್ಯ ಹಾಗೂ ಸೀಮಿತ ವಾಗಿದ್ದ ಮಹಿಳೆ ಇಂದು ಬಹುತೇಕ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಅದ ಹೆಜ್ಜೆ ಗುರುತನ್ನು ಮೂಡಿಸಿ ಇಂದಿನ ಸಮಾಜದ ಒಂದು ಪ್ರಮುಖ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿದ್ದಾಳೆ. ಸ್ವರ್ಧಾತ್ಮಕ ಪ್ರಪಂಚದಲ್ಲೂ ಗಂಡಿಗೆ ಸರಿಸಮನಾಗಿ ನಿಂತು ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುತ್ತಿರುವ ಮಹಿಳೆಯ ಅದಮ್ಯ ಸಾಧನೆ ಹಾಗೂ ಬೆಳವಣಿಗೆಯನ್ನು ಮೆಚ್ಚಬೇಕಾದದ್ದೇ. ಕುಟುಂಬದಲ್ಲಿ ಹೆಣ್ಣಿನ ಪಾತ್ರ ತುಂಬಾ ಪ್ರಮುಖ ಹಾಗೂ ಬಹುಮುಖವಾದದ್ದು. ಮಗಳಾಗಿ, ಗೃಹಿಣಿಯಾಗಿ, ಸೊಸೆಯಾಗಿ, ತಾಯಿಯಾಗಿ ಇಡೀ ಕುಟುಂಬವನ್ನು ತನ್ನ ಮಮತೆಯ ಸೆಲೆಯಿಂದ ಬೆಸೆದು ಮುನ್ನಡೆಸುವ ಚೈತನ್ಯದ ಚಿಲುಮೆ ಆಕೆ. ಕುಟುಂಬದಲ್ಲಿ ಪ್ರತಿಯೊಬ್ಬರೂ ಆಸೆಯಿಂದ ಬಯಸುವುದು ಪ್ರೀತಿ, ಮಮತೆ, ಸಹನೆ ಹಾಗೂ ವಿಶ್ವಾಸ ಇದಿಷ್ಟರಲ್ಲೇ ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತು ಸರ್ವಕಾಲಿಕವಾದದ್ದು. ಹೀಗೆ ಸಂಸಾರದ ಕಣ್ಣಾಗಿರುವ ಹೆಣ್ಣಿಗೆ ಶಿಕ್ಷಣ ಬಹು ಮುಖ್ಯ. ಅದಕ್ಕೆ ಎಲ್ಲ ಹಿರಿಯರು ಹೇಳಿರುವುದು ಒಂದು ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ. ಕುಟುಂಬ ಸ್ವಾಸ್ತö್ಯವೇ ಸಮಾಜದ ಸ್ವಾಸ್ತö್ಯದ ಅಡಿಗಲ್ಲಲ್ಲವೇ. ಪ್ರಸಕ್ತ ಕಾಲದ ವಿದ್ಯಮಾನದಲ್ಲಿ ಒಡೆದು ಹೋಳಾಗುತ್ತಿರುವ ಕೌಟುಂಬಿಕ ಬದುಕಿನ ಚಿತ್ರಣ.
ಮಹಿಳಾ ಸಬಲೀಕರಣವು ಸಮಾಜದಲ್ಲಿ ಸಂತೋಷ ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಮಹಿಳೆಯರಲ್ಲಿ ಶಕ್ತಿಯನ್ನು ಸೃಷ್ಟಿಸುವ ಪ್ರಕ್ರಿಯೆಯಾಗಿದೆ. ಯಾವುದೇ ಮಿತಿ ಮತ್ತು ನಿರ್ಬಂಧಗಳಿಲ್ಲದೆ ಶಿಕ್ಷಣ, ವೃತ್ತಿ, ಜೀವನ ಶೈಲಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಡೆಯಲು ಸಾಧ್ಯವಾದಾಗ ಮಹಿಳೆಯರು ಸಬಲರಾಗುತ್ತಾರೆ. ಇದು ಶಿಕ್ಷಣ, ಅರಿವು, ಸಾಕ್ಷರತೆ ಮತ್ತು ತರಬೇತಿಯ ಮೂಲಕ ಅವರ ಸ್ಥಾನಮಾನವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ. ಮಹಿಳಾ ಸಬಲೀಕರಣದ ಉದ್ದೇಶ ಮಹಿಳೆ ಯರಲ್ಲಿ ಜಾಗೃತಿಯನ್ನು ಮೂಡಿಸಿ ವೈಯಕ್ತಿಕವಾಗಿ ಕ್ರಿಯಾಶೀಲರಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದಾಗಿದೆ. ಮಹಿಳೆ ಯರಿಗೆ ನ್ಯಾಯ, ನಿಷ್ಠೆ ಒದಗಿಸುವಂತೆ ಮಾಡಲಾಗಿದೆ. ಶತ ಶತಮಾನಗಳಿಂದ ಪಕ್ಷಪಾತ, ಹಿಂಸೆ, ಸ್ವಾರ್ಥತೆಗೆ ಬಲಿಯಾದ ಮಹಿಳಾ ವರ್ಗಕ್ಕೆ ನ್ಯಾಯ ಒದಗಿಸಿ ಸಮಾಜದಲ್ಲಿ ಒಂದು ಸ್ಥಾನ ಕಲ್ಪಿಸಿ ಗೌರವ ಯುತವಾಗಿ ಬಾಳಲು ಅವಕಾಶ ಕಲ್ಪಿಸಿಕೊಡುವುದು ಆತ್ಮಸ್ಥೆರ್ಯ, ವಿಶ್ವಾಸ, ದೃಢತೆಯನ್ನು ತಂದುಕೊಳ್ಳಲು ಅನುಕೂಲಕರ ವಾತಾವರಣ ರೂಪಿಸಿಲು ಪ್ರಯತ್ನಿಸಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಹೆಣ್ಣಿನಿಂದ ಜಗತ್ತಿನ ಅಸ್ತಿತ್ವ ಉಳಿಯಲು ಸಾಧ್ಯ. ಜನರನ್ನು ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿಗೊಳಿಸಬೇಕಾದರೆ ಮೊದಲು ಮಹಿಳೆಯನ್ನು ಜಾಗೃತಿಗೊಳಿಸಬೇಕು. ಒಂದು ಸಲ ಮಹಿಳೆ ಪ್ರಗತಿ ಪಥದಲ್ಲಿ ಚಲಿಸಲು ಆರಂಭಿಸಿದರೆ ಕುಟುಂಬ ಸಮಾಜ ಹಾಗೂ ದೇಶದ ಪ್ರಗತಿಯಾಗುತ್ತದೆ.
- ನಿರ್ಮಲ ಪೂವಯ್ಯ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿ, ಮೊ. ೯೪೪೯೯೪೬೧೪೨