ಮಡಿಕೇರಿ, ಮಾ. ೭: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾ. ೯ ರಿಂದ ೨೯ ರವರೆಗೆ ಜರುಗಲಿದ್ದು, ಪರೀಕ್ಷೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಾ .ಬಿ.ಸಿ. ಸತೀಶ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ೧೯ ಪರೀಕ್ಷಾ ಕೇಂದ್ರಗಳಲ್ಲಿ ತಾ. ೯ ರಿಂದ ೨೯ ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಯಾವುದೇ ರೀತಿಯ ಅವ್ಯವಹಾರಗಳಿಗೆ ಆಸ್ಪದ ನೀಡಬಾರದು. ಪರೀಕ್ಷೆಗಳನ್ನು ಪಾರದರ್ಶಕತೆಯಿಂದ ನಡೆಸಲು ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ‘ಎ’ ಮತ್ತು ‘ಬಿ’ ಗ್ರೂಪ್ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದೂರದ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆಗಳನ್ನು ಸರಿಯಾದ ಸಮಯದಲ್ಲಿ ತಲುಪುವಂತಾಗಬೇಕು. ಹಾಗೆಯೇ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗಲು ಮಾರ್ಗಾಧಿಕಾರಿಗಳ ವಾಹನಕ್ಕೆ ಜಿಪಿಎಸ್ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಅವರು ಮಡಿಕೇರಿ ೫, ವೀರಾಜಪೇಟೆ ೨, ಪೊನ್ನಂಪೇಟೆ ೪, ಸೋಮವಾರಪೇಟೆ ೩, ಕುಶಾಲನಗರ ೫ ಸೇರಿದಂತೆ ಜಿಲ್ಲೆಯ ೧೯ ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತ ಪರೀಕ್ಷೆ ನಡೆಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಮಾತನಾಡಿ, ಪರೀಕ್ಷೆಗೆ ತೆರಳುವ ಪರೀಕ್ಷಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿದಲ್ಲಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಹಾಗೂ ಬಸ್ ಸಂಚಾರದಲ್ಲಿ ವ್ಯತ್ಯಯವಿರುವ ಕಡೆ ಬಸ್ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಖಜಾನೆ ಇಲಾಖೆಯ ಉಪ ನಿರ್ದೇಶಕಿ ಪದ್ಮಜಾ, ಡಿವೈಎಸ್ಪಿ ಜಗದೀಶ್, ತಹಶೀಲ್ದಾರ್ ಕಿರಣ್, ವಿವಿಧ ಕಾಲೇಜಿನ ಪ್ರಾಂಶುಪಾಲರು ಇತರರು ಇದ್ದರು.