ಸುಂಟಿಕೊಪ್ಪ, ಮಾ. ೭: ಹರದೂರು ಗ್ರಾಮದ ಉದ್ದಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವವು ನಡೆಯಿತು.
ಶನಿವಾರ ಬೆಳಿಗ್ಗೆ ಗಣಹೋಮ ಮತ್ತು ಸತ್ಯ ನಾರಾಯಣ ಪೂಜೆ ನೆರವೇರಿಸಲಾಯಿತು. ರಾತ್ರಿ ಭಂಡಾರ ತೆಗೆಯುವುದರ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರಕಿತು. ೧೧ ಗಂಟೆಯ ನಂತರ ಕಲ್ಲುರ್ಟಿ ದೈವದ ನೇಮವು ನಡೆಯಿತು.
ತಾ. ೫ ರಂದು ಬೆಳಿಗ್ಗೆ ೫.೩೦ ಗಂಟೆಗೆ ಪಂಜುರ್ಲಿ ದೈವದ ನೇಮ, ಬೆಳಿಗ್ಗೆ ೭ ಗಂಟೆಗೆ ಗುಳಿಗ ದೈವದ ಕೋಲ, ೧೧ ಗಂಟೆಗೆ ಜೋಡಿ ಕೊರಗಜ್ಜ ದೈವದ ನೇಮೋತ್ಸವ ನೆರವೇರಿತು.
ಸಂಜೆ ೪ ಗಂಟೆಗೆ ಭಂಡಾರ ಗರಡಿಯಿಂದ ಸ್ವಸ್ಥಾನಕ್ಕೆ ತೆಗೆದುಕೊಂಡು ಹೋಗುವುದರ ಮೂಲಕ ನೇಮೋತ್ಸವ ತೆರೆ ಕಂಡಿತು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕೊಡಗರಹಳ್ಳಿ, ಪನ್ಯ, ಸುಳ್ಯ, ಮಂಗಳೂರು, ಬೆಂಗಳೂರು, ಕುಶಾಲನಗರ ಭಾಗದ ಭಕ್ತರು ಆಗಮಿಸಿ ಕಾರ್ಣಿಕ ದೈವಗಳ ನೇಮವನ್ನು ವೀಕ್ಷಿಸಿದರು.
ಮುಖ್ಯಸ್ಥರಾದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಶಾಂತಪ್ಪ ಪೂಜಾರಿ, ಪದ್ಮನಾಭ ಸುಳ್ಯ, ದೇವಕ್ಕಿ ಮಣಿ ಮುಖೇಶ್, ಜಗದೀಶ್, ಬೇಬಿ, ಶೇಖರ್ ಪೂಜಾರಿ, ಬಿ.ಟಿ. ರಮೇಶ್ ಪೂಜಾರಿ, ವೆಂಕಪ್ಪ ಪೂಜಾರಿ, ದೇವಪ್ಪ, ಸತೀಶ್, ನಾಗೇಶ್ ಪೂಜಾರಿ, ಗ್ರಾಮಸ್ಥರು ಇದ್ದರು.