ಮಡಿಕೇರಿ, ಮಾ. ೬: ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ತಾ. ೯ ರಂದು ರಾಜ್ಯವ್ಯಾಪಿ ಸ್ವಯಂಪ್ರೇರಿತವಾಗಿ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ಜಿಲ್ಲೆಯ ಜನ ಒಂದಾಗಬೇಕೆAದು ಕೊಡಗು ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಇತ್ತೀಚಿಗೆ ಮಧುಗಿರಿ ಶಾಸಕ ಮಾಡ್ನಳ್ ವಿರೂಪಾಕ್ಷ ಅವರ ಪುತ್ರ ಪ್ರಶಾಂತ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದೇ ರೀತಿ ಅನೇಕ ಲಂಚ ಪ್ರಕರಣಗಳ ಆರೋಪವನ್ನು ಬಿಜೆಪಿ ಸರಕಾರ ಹೊತ್ತು ೪೦% ಸರಕಾರ ಎಂದು ಕರೆಸಿಕೊಂಡಿದೆ. ಹಗರಣಗಳ ಮೂಲಕ ರಾಜ್ಯವನ್ನು ಬಿಜೆಪಿ ಲೂಟಿ ಮಾಡುತ್ತಿದೆ. ಮುಖ್ಯಮಂತ್ರಿ

(ಮೊದಲ ಪುಟದಿಂದ) ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ಅವರು, ತಾ. ೯ ರಂದು ಬೆಳಿಗ್ಗೆ ೯ ರಿಂದ ೧೧ ಗಂಟೆಯ ತನಕ ಪ್ರತಿಭಟನೆ ನಡೆಯಲಿದ್ದು, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂಬ ಹಂಬಲ ಹೊತ್ತವರು ಬಂದ್‌ಗೆ ಬೆಂಬಲ ಸೂಚಿಸಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಯಾವುದೇ ರೀತಿಯಲ್ಲಿ ಒತ್ತಾಯಪೂರ್ವಕ ಬಂದ್‌ಗೆ ಮುಂದಾಗುವುದಿಲ್ಲ. ಸಂಚಾರ ಸಮಸ್ಯೆ ಸೃಷ್ಟಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ತೊಡಕು ಉಂಟುಮಾಡುವುದಿಲ್ಲ. ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಸ್ವಯಂಪ್ರೇರಿತವಾಗಿ ಕೈಜೋಡಿಸುವಂತೆ ಕೋರಿದರು.

ಪ್ರಜಾಧ್ವನಿ ಯಾತ್ರೆ: ತಾ. ೧೨ ಹಾಗೂ ೧೩ ರಂದು ಜಿಲ್ಲೆಯ ವಿವಿಧೆಡೆ ಪ್ರಜಾಧ್ವನಿ ಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾಹಿತಿ ನೀಡಿದರು.

ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತಾ. ೧೨ ರಂದು ಬೆಳಿಗ್ಗೆ ಗೋಣಿಕೊಪ್ಪದಲ್ಲಿ ಆರಂಭಗೊAಡು ಮಧ್ಯಾಹ್ನ ೨ ಗಂಟೆಗೆ ಸಿದ್ದಾಪುರ, ಸಂಜೆ ೫.೩೦ಕ್ಕೆ ಕುಶಾಲನಗರದಲ್ಲಿ, ತಾ. ೧೩ ರಂದು ಬೆಳಿಗ್ಗೆ ೧೧ ಗಂಟೆಗೆ ಸೋಮವಾರಪೇಟೆ, ಮಧ್ಯಾಹ್ನ ೨ ಗಂಟೆಗೆ ಮಡಿಕೇರಿ, ಸಂಜೆ ೫ಕ್ಕೆ ನಾಪೋಕ್ಲಿನಲ್ಲಿ ಪ್ರಜಾಧ್ವನಿ ಯಾತ್ರೆ ಸಾಗಲಿದೆ. ಬಿಜೆಪಿ ಸರಕಾರದ ವೈಫಲ್ಯ, ಕಾಂಗ್ರೆಸ್ ಅವಧಿಯ ಸಾಧನೆಯನ್ನು ಈ ಸಂದರ್ಭ ಪ್ರಚುರಪಡಿಸಲಾಗುವುದು ಎಂದು ವಿವರಿಸಿದರು.

ಗ್ರೇಟರ್ ರಾಜಾಸೀಟ್‌ನಲ್ಲಿ ಅವ್ಯವಹಾರ

ರಾಜಾಸೀಟ್ ವ್ಯಾಪ್ತಿ ಹೆಚ್ಚಿಸಿದ ಯೋಜನೆ ‘ಗ್ರೇಟರ್ ರಾಜಾಸೀಟ್’ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಸಂಬAಧ ಆಧಾರ ಸಹಿತ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ತಿಳಿಸಿದರು.

ಯೋಜನೆಗಳ ಹೆಸರಿನಲ್ಲಿ ಅನೇಕ ಅವ್ಯವಹಾರ ನಡೆದಿದೆ. ಇವೆಲ್ಲವನ್ನು ಬಯಲಿಗೆಳೆಯಲಾಗುವುದು ಎಂದು ಎಚ್ಚರಿಸಿದ ಅವರು, ಜಲಜೀವನ ಮಿಷನ್ ಯೋಜನೆ ಅನುಷ್ಠಾನಗೊಳ್ಳದ ಜಾಗದಲ್ಲಿ ಹಣ ಪಾವತಿ ಮಾಡಬಾರದು. ಕೆಲವೆಡೆ ಹಣ ಪಾವತಿಸಲಾಗಿದೆ. ಅಂತವುಗಳನ್ನು ಪತ್ತೆಹಚ್ಚಿ ಹಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸದ್ಯದಲ್ಲಿಯೇ ಅಭ್ಯರ್ಥಿ ಘೋಷಣೆ

ತಾ. ೧೫ ರೊಳಗೆ ಕೊಡಗು ಜಿಲ್ಲೆಯ ೨ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಧರ್ಮಜ ಹೇಳಿದರು. ಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ವಕ್ತಾರ ತೆನ್ನೇರ ಮೈನಾ, ಪ್ರಧಾನ ಕಾರ್ಯದರ್ಶಿ ಎಸ್. ಯಶ್, ಮಡಿಕೇರಿ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ ಹಾಜರಿದ್ದರು.