ಕುಶಾಲನಗರ, ಮಾ. ೬: ಕುಶಾಲನಗರ ಪುರಸಭೆ ವ್ಯಾಪ್ತಿಯ ಬಿಜೆಪಿ ಪಕ್ಷದ ಪೇಜ್ ಪ್ರಮುಖರ ಸಮಾವೇಶ ಸ್ಥಳೀಯ ರೈತ ಸಹಕಾರ ಭವನದಲ್ಲಿ ನಡೆಯಿತು.

ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಸಮಾವೇಶಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕುಶಾಲನಗರ ತಾಲೂಕು ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ೨ ಸಾವಿರ ಕೋಟಿ ಅನುದಾನ ತರುವ ಮೂಲಕ ಕ್ಷೇತ್ರದ ರಸ್ತೆಗಳನ್ನು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿ ಪಡಿಸಲಾಗಿದೆ. ಕೇಂದ್ರ ಸರ್ಕಾರ ಜಲ್‌ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದೆ.

ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ ಮನಕ್ಕೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಅಖಂಡ ಭಾರತವನ್ನು ತುಂಡು ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶದ ಅವಿಭಾಜ್ಯ ಅಂಗಗಳನ್ನು ಪ್ರತ್ಯೇಕಗೊಳಿಸಿದ ಕಾಂಗ್ರೆಸ್ ನ ದೇಶ ಒಡೆಯುವ ಕೆಲಸ ವಿರೋಧಿಸಿ ಹುಟ್ಟಿಕೊಂಡ ಜನಸಂಘ, ಕಾಲಕಾಲಕ್ಕೆ ಬದಲಾವಣೆಗಳೊಂದಿಗೆ ಬಿಜೆಪಿಯಾಗಿ ಇಂದು ದೇಶದಲ್ಲಿ ಅತ್ಯಂತ ಜನಪರ ಆಡಳಿತ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭ ಪಕ್ಷದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಉಸ್ತುವಾರಿ ತಿಮ್ಮಪ್ಪಶೆಟ್ಟಿ, ಮಂಗಳೂರು ವಿಭಾಗ ಒಬಿಸಿ ಅಧ್ಯಕ್ಷ ಆರ್.ಸಿ.ನಾರಾಯಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿ.ಕೆ.ಲೋಕೇಶ್, ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ನಾಗೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ವಕ್ತಾರ ಕೆ.ಜಿ.ಮನು, ಪ್ರಮುಖರಾದ ವಿ.ಎಂ.ವಿಜಯ, ಎಂ.ಎನ್.ಕುಮಾರಪ್ಪ, ಪ್ರವೀಣ್, ಸುನಿಲ್, ಪ್ರಶಾಂತ್, ಶಿವಾಜಿ, ಸೇರಿದಂತೆ ಬೂತ್ ಪ್ರಮುಖರು ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ೧೫೦ ಕ್ಕೂ ಅಧಿಕ ಮಂದಿ ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಪಕ್ಷಗಳನ್ನು ತೊರೆದ ೧೦೦ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಸಮಾವೇಶಕ್ಕೂ ಮುನ್ನ ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯದಿಂದ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.