ಮಡಿಕೇರಿ, ಮಾ. ೫: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾ. ೭ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಂಘದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ. ವಿಕ್ರಾಂತ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಕೊಡಗಿನಿಂದ ೨೦೦ಕ್ಕೂ ಅಧಿಕ ಅತಿಥಿ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಅತಿಥಿ ಶಿಕ್ಷಕರ ಜೀವನಕ್ಕೆ ಭದ್ರತೆ ಇಲ್ಲದಾಗಿದೆ. ತಿಂಗಳ ವೇತನ ೧೦ ಸಾವಿರ ಇದ್ದು, ಅದರಿಂದ ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿದೆ. ತಾ. ೩೧ರ ನಂತರ ಶಾಲೆಯಿಂದ ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸಿದೆ. ಅದೇ ಶಾಲೆಗಳಲ್ಲಿ ಮುಂದುವರಿಸುವ ಜೊತೆಗೆ ಕೆಲಸ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಕರನ್ನು ಖಾಯಂಗೊಳಿಸುವ ಮೂಲಕ ಕನಿಷ್ಟ ವೇತನ ಜಾರಿಗೊಳಿಸಬೇಕು. ಸೇವಾ ದೃಢೀಕರಣ ನೀಡಬೇಕು ಎಂದು ಒತ್ತಾಯಿಸಿದ ಅವರು, ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುವ ಅಭ್ಯರ್ಥಿಗೆ ಈ ಬಾರಿ ಪಕ್ಷಾತೀತವಾಗಿ ಮತ ನೀಡಲಾಗುತ್ತದೆ. ತಪ್ಪಿದಲ್ಲಿ ಅತಿಥಿ ಶಿಕ್ಷಕರು ಹಾಗೂ ಅವರ ಕುಟುಂಬಸ್ಥರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ವಿಕ್ರಾಂತ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಸಮಿತಿ ಸಂಚಾಲಕ ನಾಗರಾಜ್, ಜಿಲ್ಲಾ ಸಂಚಾಲಕ ಬಿ.ಎ. ರೋಷನ್, ಕಾರ್ಯದರ್ಶಿ ಬಿ.ಆರ್. ರಾಜೇಶ್, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷೆ ಎನ್.ಪಿ. ದಿವ್ಯಶ್ರೀ, ಕಾರ್ಯದರ್ಶಿ ಮೇನಕ ಹಾಜರಿದ್ದರು.