ಕರಿಕೆ, ಮಾ. ೫: ಇಲ್ಲಿಗೆ ಸಮೀಪದ ಚಾಂಡಟ್ಕೊಲ್ಲಿ ಎಂಬಲ್ಲಿ ತಲಕಾವೇರಿ ವನ್ಯಧಾಮದೊಳಗೆ ಅಕ್ರಮವಾಗಿ ಬೇಟೆಯಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ನಾಡ ಬಂದೂಕು ಸಮೇತ ಬಂಧಿಸಿದ್ದು, ಕಣ್ಣೂರು ಜಿಲ್ಲೆಯ ಕಾಣಬೈಲು ಗ್ರಾಮದ ಜಿಶಾನು ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ. ಮಡಿಕೇರಿ ವನ್ಯಜೀವಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಶ್ರೀನಿವಾಸ ನಾಯಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಕೊಟ್ರೆಶ್ ನೇತೃತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಆನಂದ್ ಕೆ.ಕೆ., ವನಪಾಲಕರಾದ ಯತೀಶ ಬಿ.ಎಂ., ಸುಬ್ರಮಣಿ ಕೆ.ಎಂ. ಹಾಗೂ ಕಳ್ಳ ಬೇಟೆ ಶಿಬಿರದ ಸಿಬ್ಬಂದಿಗಳು, ವಾಹನ ಚಾಲಕರು ಪಾಲ್ಗೊಂಡಿದ್ದರು. - ಸುಧೀರ್ ಹೊದ್ದೆಟ್ಟಿ