ಗೋಣಿಕೊಪ್ಪಲು, ಮಾ. ೫: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಬುಕಾಡು ಗಿರಿಜನರ ಹಾಡಿಯಲ್ಲಿ ತಿತಿಮತಿ ವಲಯ ಕಾಂಗ್ರೆಸ್‌ನ ಅಧ್ಯಕ್ಷ ಹೆಚ್. ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಇದೇ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ದೇಶದಲ್ಲಿ ಬಡವ ಹಾಗೂ ಶ್ರೀಮಂತ ಎಂಬ ಎರಡು ಜಾತಿ ಹೊರತುಪಡಿಸಿ ಬೇರೆ ಯಾವುದೇ ಜಾತಿ ಇಲ್ಲ. ಇಂದು ಆಡಳಿತ ಮಾಡುತ್ತಿರುವ ಪಕ್ಷ ಶ್ರೀಮಂತರ ಪಕ್ಷವಾಗಿದೆ. ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ. ಅದಾನಿ ಎಂಬುವರು ಕಳೆದ ಮೂರು ವರ್ಷದಲ್ಲಿ ದೇಶದಲ್ಲೇ ಅತೀ ಶ್ರೀಮಂತರಾಗಿ ಹೊರ ಹೊಮ್ಮಿದ್ದಾರೆ. ಇದನ್ನು ಪ್ರಶ್ನಿಸಿದರೆ ಆಡಳಿತ ಪಕ್ಷದವರ ಬಳಿ ಉತ್ತರ ಇಲ್ಲ. ವೈಯಕ್ತಿಕ ಟೀಕೆಗೆ ಸೀಮಿತರಾಗಿದ್ದಾರೆ.

ಕಾನೂನಿನಡಿಯಲ್ಲಿ ಹೋರಾಟ ಮಾಡಿ ಜಿಲ್ಲೆಯ ಹಲವು ಕಡೆಗಳಲ್ಲಿ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ನನಗೆ ಅಧಿಕಾರವಿಲ್ಲ. ಬಡವರ ನಿವೇಶನಗಳನ್ನು ಸೈಟ್ ಮಾಡಿ ಮಾರಾಟ ಮಾಡುವ ಹುನ್ನಾರ ನಡೆದಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತರುವ ಮೂಲಕ ಬಡವರ ರಕ್ಷಣೆಗೆ ಧಾವಿಸಿದ್ದೇನೆ. ಇದೀಗ ಬಡವರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಬಳಿ ಅಧಿಕಾರವಿಲ್ಲದಿದ್ದರೂ ನ್ಯಾಯಾಂಗದ ಮೂಲಕ, ಸಂಘಟನೆಯ ಸ್ವಂತ ಶಕ್ತಿಯಿಂದ ಬಡವರ ಪರ,ಶೋಷಿತರ ಪರ ನಿಂತಿದ್ದೇವೆ. ಸುಳ್ಳನ್ನು ಹೇಳುವವರ, ದಾರಿ ತಪ್ಪಿಸುವವರೊಂದಿಗೆ ಗುರುತಿಸಿಕೊಳ್ಳದಿರಿ. ಇದರಿಂದ ಮುಂದೆ ಉತ್ತಮ ಸಮಾಜ ನಿರ್ಮಾಣಕ್ಕೆ ಆದಿವಾಸಿಗಳು ಕಾರಣವಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎನ್. ರಾಜರಾವ್ ಮಾತನಾಡಿ, ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸಕಲ ಸವಲತ್ತುಗಳು ನೀಡಬೇಕೆಂಬ ಕಾನೂನಿದ್ದರು ಇದನ್ನು ಗಾಳಿಗೆ ತೂರಿ ಆದಿವಾಸಿಗಳನ್ನು ಇನ್ನೂ ಕೂಡ ಮೂಲ ಸೌಕರ್ಯ ನೀಡದೆ ಸತಾಯಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್. ಪಂಕಜ ಮಾತನಾಡಿ, ಜಿಲ್ಲಾ ಪಂಚಾಯಿತಿ ಅವಧಿಯಲ್ಲಿ ಕೋಟ್ಯಂತರ ಅನುದಾನವನ್ನು ಗಿರಿಜನರ ಅಭಿವೃದ್ಧಿಗೆ ಬಿಡುಗಡೆ ಯಾದರೂ ಇದನ್ನು ಗಿರಿಜನರ ಏಳಿಗೆಗೆ ಬಳಸುವಲ್ಲಿ ಸತತವಾಗಿ ಸರ್ಕಾರ ವಿಫಲವಾಗಿದೆ. ಇನ್ನೂ ಕೂಡ ನೀರು, ರಸ್ತೆ, ವಿದ್ಯುತ್ ಹಾಗೂ ಮನೆಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದು ಮುಂದಿನ ದಿನದಲ್ಲಿ ಕೊನೆಯಾಗಲಿದೆ ಎಂದರು. ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಸಿ.ಜೆ. ವಿಲ್ಸನ್ ಮಾತನಾಡಿದರು.

ಸಭೆಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಆದಿವಾಸಿ ಮುಖಂಡ ಚುಬ್ರು, ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿದರು. ವೇದಿಕೆಯಲ್ಲಿ ಡಿಸಿಸಿ ಸದಸ್ಯರಾದ ವಿನಯ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್, ಕಾಂಗ್ರೆಸ್ ಸೇವಾದಳದ ಪಿ.ಬಿ. ರವೀನಾ, ಹಾಡಿ ಮುಖಂಡರಾದ ವೈ.ಸಿ. ರಮೇಶ್, ಮಾರಾ, ಪಿ.ಬಿ. ರಾಮು, ಕರ್ಪ, ಎಂ.ಎಸ್. ರಜನಿ, ಮಂಜುನಾಥ್, ಪಿ.ಸಿ. ರಾಮು, ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾ, ಮಾಜಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಸಿ.ಜೆ. ವಿಲ್ಸನ್ ಸ್ವಾಗತಿಸಿ, ಪಿ.ಬಿ. ರವೀನಾ ವಂದಿಸಿದರು.