ಮಡಿಕೇರಿ, ಮಾ. ೫: ರಾಷ್ಟçದ ರಾಜಧಾನಿ ನವದೆಹಲಿಯಲ್ಲಿರುವ ಕರ್ನಾಟಕ ಸಂಘ ೭೫ ವರ್ಷ ಪೂರೈಸಿದ್ದು, ಈ ಪ್ರಯುಕ್ತ ನಡೆದ ಅಮೃತ ಮಹೋತ್ಸವ ಸಮಾರಂಭ ದಲ್ಲಿ ಕೊಡವ ಧಿರಿಸಿನತ್ತ ಪ್ರಧಾನಿ ನರೇಂದ್ರಿ ಮೋದಿ ಅವರು ವಿಶೇಷವಾಗಿ ಆಕರ್ಷಿತರಾಗಿದ್ದರು. ಅಲ್ಲಿನ ತಾಲ್ಕಚೋರ ಒಳಾಂಗಣ ಕ್ರೀಡಾಂಗಣದಲ್ಲಿ ಅಮೃತ ಮಹೋತ್ಸವ ಸಮಾರಂಭ ಜರುಗಿದ್ದು, ಇದರಲ್ಲಿ ರಾಜ್ಯದ ವಿವಿಧ ಕಲಾ ತಂಡದವರು ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನರೇಂದ್ರ ಮೋದಿ ಹಾಗೂ ಇತರ ಪ್ರಮುಖರನ್ನು ಬರಮಾಡಿಕೊಳ್ಳುತ್ತಿದ್ದ ಸಂದರ್ಭ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಇದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಕೆಂಗೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಒಕ್ಕೂಟದ ಕಲಾ ತಂಡದ ಸದಸ್ಯರನ್ನು ಗಮನಿಸಿದ ಮೋದಿ ಅವರು ನೇರವಾಗಿ ಇವರತ್ತ ಸಾಗಿ ಬಂದರು.

ಜತೆಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ತೇಜಸ್ವಿ ಸೂರ್ಯ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ್ ಅವರುಗಳು ಮೋದಿ ಅವರ ಪ್ರಶ್ನೆಗೆ ಇವರು ಕೊಡವ ಕಲಾ ತಂಡ ಎಂಬದಾಗಿ ಪರಿಚಯಿಸಿದಾಗ ಮುಗುಳ್ನಗೆಯೊಂದಿಗೆ ಇವರನ್ನು ಮಾತನಾಡಿಸಿ ಮುಂದೆ ಸಾಗಿದರು. ಈ ಕಲಾತಂಡ ಬಟ್ಟೆಪಾಟ್ ಮೂಲಕ ಸ್ವಾಗತ ಕೋರಿದ್ದು, ವಿಶೇಷವಾಗಿತ್ತು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಎಸ್. ತಮ್ಮಯ್ಯ ಅವರ ಸಹಕಾರದೊಂದಿಗೆ ಕೆಂಗೇರಿಯ ಕಲಾತಂಡ ಭಾಗಿಯಾಗಿತ್ತು.

ಸನ್ಮಾನ

ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಬೊಳಕಾಟ್, ಕೋಲಾಟ್ ಹಾಗೂ ಕತ್ತಿಯಾಟ್‌ನ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ ಬಿ.ಎಸ್. ತಮ್ಮಯ್ಯ ಅವರು ಕರ್ನಾಟಕ ಸಂಘಕ್ಕೆ ನೀಡಿದ್ದ ಸಹಕಾರ ಹಾಗೂ ಅವರ ಕಾರ್ಯ ನಿರ್ವಹಣೆಯನ್ನು ಶ್ಲಾಘಿಸಿ ಕರ್ನಾಟಕ ಸಂಘದಿAದ ತಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.