ವೀರಾಜಪೇಟೆ, ಮಾ. ೫: ಆದಿ ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ವೀರಾಜಪೇಟೆ ತಾಲೂಕಿನ ಕದನೂರು ಗ್ರಾಮದಲ್ಲಿ ನೆಲೆಕಂಡಿರುವ ಸುಮಾರು ೩೦೦ ವರ್ಷಗಳ ಇತಿಹಾಸವಿರುವ ಶ್ರೀ ಚೈತನ್ಯ ಮಠಪುರ ಆದಿ ಮುತ್ತಪ್ಪ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕ ತೆರೆ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ಮುಂಜಾನೆ ಗಣಪತಿ ಹೋಮದೊಂದಿಗೆ ಆರಂಭವಾದ ವಾರ್ಷಿಕ ಮಹೋತ್ಸವದಲ್ಲಿ ಧ್ವಜಾರೋಹಣ, ಪೈಂಗುತ್ತಿ ಸಂಜೆ ವೇಳೆ ೭ ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ಮತ್ತು ಗುಳಿಗ ವೆಳ್ಳಾಟಂ ನಡೆಯಿತು. ಆಗಮಿಸಿದ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು.

ವಾರ್ಷಿಕ ತೆರೆ ಮಹೋತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಉತ್ಸವ ಸಮಿತಿಯ ಸದಸ್ಯರು, ಕದನೂರು ಗ್ರಾಮದ ಗ್ರಾಮಸ್ಥರು ಸೇರಿದಂತೆ, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಕ್ಕೂ ಅಧಿಕ ಮಂದಿ ತೆರೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.