ಮಡಿಕೇರಿ, ಮಾ. ೩: ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಸಂಯುಕ್ತ ಆಶ್ರಯದಲ್ಲಿ ಆದಾಯ ತೆರಿಗೆ, ಜಿ.ಎಸ್.ಟಿ., ಮತ್ತು ಸಹಕಾರ ಸಂಘಗಳ ಚುನಾವಣೆ ಕುರಿತು ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮವನ್ನು ಮಡಿಕೇರಿಯ ಹೊಟೇಲ್ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು, ಕಾರ್ಯಕ್ರಮದಲ್ಲಿ ಜಿ.ಎಸ್.ಟಿ. ಮತ್ತು ಆದಾಯ ತೆರಿಗೆ ಕುರಿತು ಉಪನ್ಯಾಸ ನೀಡಲಾಗುತ್ತಿದೆ. ಈ ವಿಷಯಗಳು ನಮ್ಮ ದೈನಂದಿನ ವ್ಯವಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಸಂಘಗಳು ಕಾನೂನುಬದ್ಧವಾಗಿ ಪಾವತಿಸಬೇಕಾದಂತಹ ತೆರಿಗೆಗಳ ಕುರಿತು ಮಾಹಿತಿಯನ್ನು ಅರಿತುಕೊಳ್ಳು ವಂತಾಗಬೇಕು. ಆಡಳಿತ ಮಂಡಳಿ ಸದಸ್ಯರು ಎಲ್ಲಾ ಮಾಹಿತಿಗಳನ್ನು ಸೂಕ್ಷö್ಮವಾಗಿ ತಿಳಿದುಕೊಂಡಲ್ಲಿ ಸಂಘದ ಸುಲಲಿತ ಬೆಳವಣಿಗೆ ಸಾಧ್ಯವಾಗುತ್ತದೆ. ಅಂತೆಯೇ ಈ ಬಾರಿ ಅನೇಕ ಸಂಘಗಳಿಗೆ ಚುನಾವಣೆ ಇರುವುದರಿಂದ ಯಾವುದೇ ಗೊಂದಲ ಗಳಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು. ಅಲ್ಲದೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಹಕಾರ ಕ್ಷೇತ್ರದಿಂದಲೂ ಆಯ್ಕೆ ಮಾಡುವಂತೆ ಸ್ಥಾನಗಳನ್ನು ಮೀಸಲಿರಿಸಬೇಕೆಂದು ಹೇಳಿದರು ಹಾಜರಿದ್ದ ಎಲ್ಲಾ ಪ್ರತಿನಿಧಿಗಳು ಒಪ್ಪಿ ಈ ಕುರಿತು ನಿರ್ಣಯ ಅಂಗೀಕರಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ಸಹಕಾರಿ ಹಾಗೂ ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ ಉದ್ಘಾಟಿಸಿ, ಸಹಕಾರ ಕ್ಷೇತ್ರವು ಎಲ್ಲಾ ವರ್ಗದವರನ್ನು ಮುಕ್ತವಾಗಿ ಆಹ್ವಾನಿಸುತ್ತಿದ್ದು, ತಾನು ಸಹ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸಿ ಆ ಮೂಲಕ ಸಮಾಜ ಸೇವೆಯಲ್ಲಿ ಸಹ ತೊಡಗಿಸಿಕೊಳ್ಳಲು ಸಹಕಾರಿ ಯಾಯಿತು. ಕೊಡಗು ಜಿಲ್ಲೆಯನ್ನು ಸಹ ಇತ್ತೀಚೆಗೆ ಪ್ರಶಸ್ತಿಗೆ ಪರಿಗಣಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸುತ್ತಾ ತಾನು ಈ ನೆಲದ ಕಲೆ, ಸಂಸ್ಕೃತಿಯನ್ನು ಬೆಳೆಸುವಲ್ಲಿ ಅಲ್ಪ ಕಾಣಿಕೆಯನ್ನು ನೀಡಿದ್ದು ಜಿಲ್ಲೆಯ ಜನತೆ ಕಲೆ, ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರಶೆಟ್ಟಿ ಇಂದ್ರಾಳಿ ಮಾತನಾಡಿ, ಪ್ರತಿಯೊಂದು ಸಹಕಾರ ಸಂಘವು ಕಾಯ್ದೆ-ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಯ್ದೆ-ಕಾನೂನಿನಲ್ಲಾಗುವ ಬದಲಾವಣೆಗಳ ಅರಿವು ಇರಬೇಕಾಗುತ್ತದೆ. ಸಹಕಾರಿ ಕ್ಷೇತ್ರ ಸಾಕಷ್ಟು ಬೆಳೆದಿದೆ, ಪ್ರಗತಿ ಸಾಧಿಸುತ್ತಿದೆ. ಮಹಿಳೆಯರು ಗ್ರಾಮೀಣ ಮಟ್ಟದಲ್ಲಿ ಸಹಕಾರ ಕ್ಷೇತ್ರವನ್ನು ಅವಲಂಬಿಸಿದ್ದಾರೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಕೇಂದ್ರ ಸಹಕಾರ ಸಚಿವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ಗಮನ ಸೆಳೆಯುವ ಕೆಲಸವಾಗಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಯ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವುಗಳು ಇನ್ನಷ್ಟು ಪ್ರಗತಿ ಸಾಧಿಸಿ ದೇಶಕ್ಕೆ ಕೊಡುಗೆಯನ್ನು ನೀಡಲಿ ಎಂದು ಶುಭ ಹಾರೈಸಿದರು.
‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ನದು ಲೆಕ್ಕಿಗರಾದ ಎಸ್.ವಿ. ಶಂಭುಲಿAಗಪ್ಪರವರು ಆದಾಯ ತೆರಿಗೆ, ಜಿ.ಎಸ್.ಟಿ., ಮತ್ತು ಸಂಘದ ಆರ್ಥಿಕತೆ ಹಾಗೂ ಸಿಬ್ಬಂದಿ ವೇತನ ಸಮನ್ವಯತೆ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು. ಸಹಕಾರ ಸಂಘಗಳ ಚುನಾವಣೆ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ. ಮೋಹನ್ರವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಪ್ರೇಮ ಸೋಮಯ್ಯ, ಕೆ.ಎಂ. ತಮ್ಮಯ್ಯ, ಪಿ.ಸಿ. ಅಚ್ಚಯ್ಯ, ಎನ್.ಎಂ. ಉಮೇಶ್ ಉತ್ತಪ್ಪ, ಪಿ.ವಿ. ಭರತ್, ಪಿ.ಬಿ. ಯತೀಶ್, ಕನ್ನಂಡ ಸಂಪತ್ ಉಪಸ್ಥಿತರಿದ್ದರು.
ಯೂನಿಯನ್ ನಿರ್ದೇಶಕ ಕೆ.ಎಸ್. ಗಣಪತಿ ಸ್ವಾಗತಿಸಿ, ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿ, ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿ, ಬಿ.ಸಿ. ಅರುಣ್ ಕುಮಾರ್ ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಿದರು.