ಕಣಿವೆ, ಮಾ. ೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರದ ಬ್ಯಾಡಗೊಟ್ಟ ಗಿರಿಜನ ಪುನರ್ವಸತಿ ಕಾಲೋನಿಯಲ್ಲಿ ಕುಂದು ಕೊರತೆ ಸಭೆ ನಡೆಯಿತು. ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರ್ ಇತ್ತೀಚೆಗೆ ಮತಾಂತರ ಹೆಚ್ಚಾಗುತ್ತಿದ್ದು, ಸಹಾಯ ಮಾಡುವ ಹೆಸರಿನಲ್ಲಿ ಸುಲಭವಾಗಿ ಮತಾಂತರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದು ಮತಾಂತರಗೊಳಿಸುವ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಮತಾಂತರವಾಗಬೇಕಾದಲ್ಲಿ ಕಾನೂನಾತ್ಮಕವಾಗಿ ಆಗಬಹುದು. ಆಮಿಷಗಳಿಗೆ ಒಳಗಾಗಿ ಮತಾಂತರಗೊಳ್ಳುವುದು ತಪ್ಪು ಎಂದು ತಿಳಿಸಿದ ಅವರು, ಪ್ರತಿಯೊಬ್ಬರೂ ವಿದ್ಯಾವಂತರಾಗುವುದರ ಜೊತೆಗೆ ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.
ನಂತರ ಮಾತನಾಡಿದ ಹಾಡಿಯ ಮುಖಂಡ ಜೆ.ಕೆ. ಅನಿತ ಹಾಡಿಯಲ್ಲಿ ಅನೇಕ ಸಮಸ್ಯೆಗಳಿವೆ. ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗುತ್ತಿದೆ ಹಾಗೂ ಚರಂಡಿ ರಸ್ತೆ ಇನ್ನೂ ಹಲವಾರು ಮೂಲಭೂತ ಸೌಲಭ್ಯಗಳನ್ನು ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ದಲಿತ ಮುಖಂಡ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಸಮಸ್ಯೆಗಳನ್ನು ತಿಳಿಸಿದರು.
ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲ್ಲಿನ ದಲಿತ ನಿವಾಸಿಗಳ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದೆಂದು ಡಿವೈಎಸ್ಪಿ ಗಂಗಾಧರ್ ತಿಳಿಸಿದರು. ಈ ಸಂದರ್ಭ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಪುನೀತ್ ಕುಮಾರ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ. ಹಮೀದ್ ಸೇರಿದಂತೆ ದಲಿತ ಮುಖಂಡರು ಹಾಗೂ ನಿವಾಸಿಗಳು ಹಾಜರಿದ್ದರು.