ಸುAಟಿಕೊಪ್ಪ, ಮಾ. ೩: ಸುಂಟಿಕೊಪ್ಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಸುಂಟಿಕೊಪ್ಪ ಚೆಸ್ಕಾಂ ಬಳಿಯ ನಿವಾಸಿಗಳಾದ ಅಮ್ಜದ್ ಶರೀಫ್ ಮತ್ತು ಫಯಾಜ್ ಎಂ.ಎಸ್. ಬಂಧಿತ ಆರೋಪಿಗಳು. ಅವರಿಂದ ರೂ. ೨೫,೦೦೦ ಮೌಲ್ಯದ ೪೦೦ ಗ್ರಾಂ. ಗಾಂಜಾ ಮತ್ತು ರೂ. ೨೭೨೦ ನಗದು ಮತ್ತು ರೂ. ೭೦,೦೦೦ ಬೆಲೆ ಬಾಳುವ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ.

ಸುಂಟಿಕೊಪ್ಪದ ಬಿ.ಎಂ. ರಸ್ತೆಯಲ್ಲಿ ಹೊಟೇಲ್‌ವೊಂದರಲ್ಲಿ ಕುಳಿತು ವ್ಯಾಪಾರ ನಡೆಸುತ್ತಿರುವ ಸಂದರ್ಭ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಐದು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಸಾರ್ವಜನಿಕರಿಂದ ಆಗಾಗ್ಗೆ ದೂರುಗಳು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಮರಾಜನ್, ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರ್ ರಾಜ್, ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಜಿ. ಮಹೇಶ್ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗುತ್ತದೆ. ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಎಂ.ಸಿ., ಹಾಲಪ್ಪ ಆರ್.ಎಸ್., ಸಿಬ್ಬಂದಿಗಳಾದ ಸತೀಶ್ ಎಂ.ವಿ., ಪ್ರವೀಣ್, ಜಗದೀಶ್, ಸಂಪತ್, ನಿಶಾಂತ್, ಸತೀಶ್ ಎಂ.ಎಸ್., ಹೊನ್ನರಾಜಪ್ಪ, ಸೌಮ್ಯ, ಲೀಲಾವತಿ, ಪ್ರಶಾಂತ್, ಸತೀಶ್ ಇಳಗೆರೆ, ಅಭಿಲಾಷ್, ಚಾಲಕ ಜಯಶಂಕರ್ ಪಾಲ್ಗೊಂಡಿದ್ದರು.