ಸೋಮವಾರಪೇಟೆ, ಮಾ. ೩: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಜನಪರ ಯೋಜನೆಗಳು ಸರ್ಕಾರಿ ಇಲಾಖೆ ಹಾಗೂ ಪಕ್ಷದ ಕಾರ್ಯಕರ್ತರ ಮೂಲಕ ಪ್ರತಿ ಕುಟುಂಬಕ್ಕೆ ತಲುಪಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ವ್ಯಕ್ತಪಡಿಸಿದರು.

ಕುಂಬೂರಿನಲ್ಲಿರುವ ಶಾಸಕ ರಂಜನ್ ಅವರ ಮನೆ ಆವರಣದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ತಾಲೂಕು ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕರ್ತರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಶ್ರಮ ಅಪಾರವಾಗಿದೆ ಎಂದು ಸ್ಮರಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಕ್ರಮ ಗಳು ಜನಸಾಮಾನ್ಯರಿಗೆ ತಲುಪಲು ಕಾರ್ಯಕರ್ತರೇ ಸಂಪರ್ಕ ಸೇತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿಟ್ಟ ನಿರ್ಧಾರದ ಮೂಲಕ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕಳೆದ ಐದು ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ೧೮೦೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ರಂಜನ್ ತಿಳಿಸಿದರು.

ಪ್ರಕೃತಿ ವಿಕೋಪ ಹಾಗೂ ಕೊರೊನಾ ಸಂಕಷ್ಟದ ಸಮಯದಲ್ಲಿ ಜನತೆಯ ಹಿತದೃಷ್ಟಿಯನ್ನು ಕಾಪಾಡುವುದರೊಂದಿಗೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ೫ ಲಕ್ಷ ಜನರಿಗೆ ೧೧ ಲಕ್ಷ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ರಂಜನ್ ಹೇಳಿದರು.

ಇದರೊಂದಿಗೆ ಕೃಷಿಕ ಸಮ್ಮಾನ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ವಾರ್ಷಿಕ ೧೦ ಸಾವಿರ ರೂಪಾಯಿ ನೀಡಲಾಗುತ್ತಿದೆ. ಅತಿವೃಷ್ಟಿಯಿಂದ ಕೊಡಗಿನಲ್ಲಿ ಕೃಷಿ ಫಸಲು ಹಾನಿಯಾದ ಸಂದರ್ಭ ಜಿಲ್ಲೆಯ ರೈತರ ಹಿತ ಕಾಪಾಡಲು ಸರ್ಕಾರ ತ್ವರಿತವಾಗಿ ಸ್ಪಂದಿಸಿದ್ದು, ಜಿಲ್ಲೆಯ ೪೭ ಸಾವಿರ ಮಂದಿ ರೈತರಿಗೆ ೧೩೮ಕೋಟಿ ಬೆಳೆ ಹಾನಿ ಪರಿಹಾರ ವಿತರಿಸ ಲಾಗಿದೆ. ಹಿಂದಿನ ಯಾವೊಂದೂ ಸರ್ಕಾರವೂ ಇಷ್ಟೊಂದು ಬೃಹತ್ ಮೊತ್ತದ ಪರಿಹಾರ ನೀಡಿಲ್ಲ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಜನ ಮೆಚ್ಚಿದ್ದಾರೆ. ದೇಶದ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಭಾರತ ವಿಶ್ವಗುರುವಾಗುವತ್ತ ಮುನ್ನಡೆಯುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಮರ್ಥವಾಗಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಎರಡೂ ಸರ್ಕಾರಗಳು ಜನ ಸಾಮಾನ್ಯರ ಶ್ರೇಯೋಭಿವೃದ್ಧಿಗೆ ಒತ್ತು ನೀಡಿವೆ ಎಂದರು.

ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರ ಪಡೆಯಿದ್ದು, ಸೇವಾ ಮನೋಭಾವದಿಂದ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿವೆ. ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಾರೆ. ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ನಿಗ್ರಹದಲ್ಲಿ ಮೋದಿಜಿ ಸರ್ಕಾರ ವಿಶ್ವಕ್ಕೆ ಮಾದರಿಯಾಗಿದೆ. ಮುಂದಿನ ಅವಧಿಗೂ ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಡಗು ಗುಡ್ಡಗಾಡು ಪ್ರದೇಶವಾಗಿರುವ ಹಿನ್ನೆಲೆ ಅತಿಯಾದ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ರಸ್ತೆ ದುರಸ್ತಿಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ೧೦೦ ಕೋಟಿ ಹಣ ಒದಗಿಸಿದ್ದು, ಜಿಲ್ಲೆಯ ಎಲ್ಲೆಡೆ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಬೋಪಯ್ಯ ತಿಳಿಸಿದರು.

ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಚುನಾವಣೆ ಉಸ್ತುವಾರಿ ತಿಮ್ಮಪ್ಪ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಎಸ್.ಸಿ. ಮೋರ್ಚಾ ಅಧ್ಯಕ್ಷ ಪ್ರತಾಪ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಎಸ್.ಸಿ.ಮೋರ್ಚಾ ಮಂಡಲ ಅಧ್ಯಕ್ಷ ಹೆಚ್.ಸಿ. ರಾಮಕೃಷ್ಣ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು, ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.