ಪೊನ್ನಂಪೇಟೆ, ಮಾ. ೨: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದ ಮೇಚಮಾಡ ಅಪ್ಪಣ್ಣ ಎಂಬವರ ತೋಟದಲ್ಲಿ ನಿನ್ನೆ ರಾತ್ರಿ ಸುಮಾರು ೮ ಗಂಟೆ ಸಮಯದಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಅಪ್ಪಣ್ಣ ಅವರು ತಮ್ಮ ಕಾಫಿ ತೋಟಕ್ಕೆ ನೀರು ಹಾಯಿಸಿದ್ದು, ನೆಲ ತೇವವಾಗಿರುವ ಕಾರಣ ಹುಲಿಯ ಹೆಜ್ಜೆ ಗುರುತು ಸ್ಪಷ್ಟವಾಗಿ ಗೋಚರಿಸಿದೆ. ನೀರು ಹಾಯಿಸುತ್ತಿದ್ದ ಸಂದರ್ಭ ಅಪ್ಪಣ್ಣ ಅವರು ಹುಲಿ ಹೆಜ್ಜೆ ಗುರುತು ಕಂಡು ಬಂದಿರುವ ಸ್ಥಳದಲ್ಲಿ ನಡೆದುಕೊಂಡು ಹೋಗಿದ್ದರು. ಆಗ ಹುಲಿ ಹೆಜ್ಜೆ ಇರಲಿಲ್ಲ. ಅವರು ಮೋಟರ್ ಆಫ್ ಮಾಡಿ ನೀರು ಹಾಯಿಸುವುದನ್ನು ನಿಲ್ಲಿಸಿ, ವಾಪಸು ಬರುವಾಗ ಹುಲಿ ಹೆಜ್ಜೆ ಅವರಿಗೆ ಕಂಡು ಬಂದಿದೆ ಎಂಬುದಾಗಿ ಅವರು ಪೊನ್ನಂಪೇಟೆ ವಲಯ ಉಪ ಅರಣ್ಯಾಧಿಕಾರಿ ದಿವಾಕರ್ ಅವರಿಗೆ ಮಾಹಿತಿ ನೀಡಿದ್ದಾರೆ.

ನಂತರ ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯ ಸಿಬ್ಬಂದಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹುಲಿ ಪತ್ತೆಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದರೂ ಹುಲಿ ಪತ್ತೆಯಾಗಿಲ್ಲ. ಇಂದೂ ಕೂಡ ಹುಲಿ ಪತ್ತೆ ಕಾರ್ಯಾಚರಣೆ ನಡೆಸಿದ್ದು ಹುಲಿಯ ಸುಳಿವು ಸಿಕ್ಕಿಲ್ಲ. ಪೊನ್ನಂಪೇಟೆ ತಾಲೂಕಿನಲ್ಲಿ ಇತ್ತೀಚೆಗೆ ಹುಲಿಯ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗುತ್ತಿವೆ. ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ನಾಡಿಗೆ ಬಂದಿರುವ ಹುಲಿಗಳನ್ನು ಸೆರೆಯಿಡಿದು ಆತಂಕ ನಿವಾರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.