*ಗೋಣಿಕೊಪ್ಪ, ಮಾ. ೨: ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ತಿಂಗಳು ಕಳೆದಿಲ್ಲ ಅದಾಗಲೇ ರಸ್ತೆ ಬಿರುಕು ಬಿಟ್ಟಿದೆ. ಇದಕ್ಕೆ ಗುತ್ತಿಗೆದಾರನ ಕಳಪೆ ಕಾಮಗಾರಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಹಳೇ ಅಂಚೆ ಕಚೇರಿ ರಸ್ತೆಯನ್ನು ರೂ. ೫.೫ ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಿದೆ. ಆದರೆ, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದೆ ಇರುವುದರಿಂದ ಕಾಂಕ್ರೀಟ್ ರಸ್ತೆ ಬಿರುಕು ಕಂಡಿದೆ. ಫೆಬ್ರವರಿ ೬ ರಂದು ಈ ರಸ್ತೆಗೆ ವಿವೇಕಾನಂದ ರಸ್ತೆ ಎಂದು ನಾಮಕರಣ ಮಾಡಿ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ವಾರ್ಡ್ ಸದಸ್ಯ ಕೆ. ರಾಜೇಶ್, ಪಿಡಿಓ ಶ್ರೀನಿವಾಸ್, ಪಂಚಾಯತ್ ರಾಜ್ ಸಹಾಯಕ ಅಭಿಯಂತರ ಮಹಾದೇವ್, ಬಗರ್ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ ಉಪಸ್ಥಿತಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರಿಂದ ರಸ್ತೆ ಉದ್ಘಾಟನೆ ಮಾಡಲಾಗಿತ್ತು. ತಿಂಗಳು ಕಳೆಯುವ ಮೊದಲೇ ರಸ್ತೆ ಬಿರುಕು ಬಿಟ್ಟ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.