ಸೋಮವಾರಪೇಟೆ, ಮಾ. ೨: ಇಲ್ಲಿನ ಒಕ್ಕಲಿಗರ ಯುವ ವೇದಿಕೆ ನೇತೃತ್ವದಲ್ಲಿ ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿ ಯೇಷನ್ನ ಆಶ್ರಯದಲ್ಲಿ ತಾ. ೪ ಮತ್ತು ೫ ರಂದು ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೪ನೇ ವರ್ಷದ ‘ಒಕ್ಕಲಿಗರ ಕಪ್’ ಅಂತಾರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾಟದಲ್ಲಿ ರಾಷ್ಟçಮಟ್ಟದ ಪ್ರತಿಷ್ಠಿತ ತಂಡಗಳಾದ ಮಹಾರಾಷ್ಟç, ಹರಿಯಾಣ, ಯುವ ಪಲ್ಟಾನ್ ಪುಣೆ, ಸೌತ್ ಸೆಂಟ್ರಲ್ ರೈಲ್ವೆ ಹೈದರಾಬಾದ್, ತಮಿಳುನಾಡು, ಜೆ.ಕೆ. ಅಕಾಡೆಮಿ ಕೇರಳ, ಏರ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಪೊಲೀಸ್, ಕಸ್ಟಮ್ಸ್ ಮತ್ತು ಜಿಎಸ್ಟಿ ತಂಡ, ಕರ್ನಾಟಕ ತಂಡ, ಚೈನ್ಸ್ ಸೇರಿದಂತೆ ಪ್ರತಿಷ್ಠಿತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಕಬಡ್ಡಿ ಪ್ರೇಮಿಗಳಿಗೆ ರಸದೌತಣ ನೀಡಲಿವೆ ಎಂದರು. ಇದರೊಂದಿಗೆ ಪ್ರೊ ಕಬಡ್ಡಿಯಲ್ಲಿ ಖ್ಯಾತಿ ಗಳಿಸಿರುವ ಆಟಗಾರರಾದ ಸಿದ್ದಾರ್ಥ್ ದೇಸಾಯಿ, ಅಜಯ್ ಠಾಕೂರ್, ಸುಖೇಶ್ ಹೆಗಡೆ, ಪ್ರಶಾಂತ್ ರೈ, ಆಕಾಶ್ಶಿಂದೆ, ಪ್ರಪಂಚನ್, ಅಸ್ಲಾಂ ಇನಾಂದರ್, ಶ್ರೀಕಾಂತ್ ಜಾದವ್, ಅಜಿತ್, ಚಂದ್ರನ್, ರಂಜಿತ್ ಮತ್ತಿತರ ಆಟಗಾರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ೨ಲಕ್ಷ ರೂ.ಗಳು, ದ್ವಿತೀಯ ೧ಲಕ್ಷ ರೂ, ತೃತೀಯ ಮತ್ತು ಚತುರ್ಥ ಬಹುಮಾನ ೫೦ಸಾವಿರ ರೂ, ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಇದರೊಂದಿಗೆ ವೈಯಕ್ತಿಕ ವಿಭಾಗದಲ್ಲೂ ಪ್ರಶಸ್ತಿ ವಿತರಿಸಲಾಗುವುದು ಎಂದು ಸುರೇಶ್ ತಿಳಿಸಿದರು.
ತಾ. ೪ ರಂದು ೧೧ ಗಂಟೆಗೆ ಕ್ರೀಡಾಪಟು ಕೆ.ಎ. ಪ್ರಕಾಶ್ ನೇತೃತ್ವದಲ್ಲಿ ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ತರಲಾಗುತ್ತದೆ. ನಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಗಳು ನಡೆಯಲಿವೆ. ರಾತ್ರಿ ಅಂತಾರಾಜ್ಯ ಮಟ್ಟದ ಪಂದ್ಯಾಟಗಳು ನಡೆಯಲಿದ್ದು, ತಾ. ೫ರ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ವಿತರಿಸಲಾಗುತ್ತದೆ ಎಂದರು. ೧೦ ಸಾವಿರ ಮಂದಿ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆ.ಬಿ. ಸುರೇಶ್, ಮೊ: ೯೪೪೮೪೩೩೨೯೪ ಸಂಪರ್ಕಿಸಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಕೆ. ಪೃಥ್ವಿ, ಕಾರ್ಯದರ್ಶಿ ಯೋಗೇಂದ್ರ ಚೌಡ್ಲು, ಪದಾಧಿಕಾರಿಗಳಾದ ಹೆಚ್.ಕೆ. ತ್ರಿಶೂಲ್, ಡಿ.ಎ. ದೇವರಾಜ್ ಇದ್ದರು.