ಕೂಡಿಗೆ, ಮಾ. ೧: ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಭ ಯುವಕ ಸಂಘದ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಕೂಡಿಗೆ ಶೈನಿಂಗ್ ಸ್ಟಾರ್ ತಂಡ ಪ್ರಥಮ ಸ್ಥಾನ ಪಡೆಯಿತು.

ದ್ವಿತೀಯ ಸ್ಥಾನವನ್ನು ಹುದುಗೂರು ಕೆವೈಸಿ ತಂಡ ಪಡೆದುಕೊಂಡಿತು. ವಾಲಿಬಾಲ್‌ನಲ್ಲಿ ಬಸವೇಶ್ವರ ತಂಡ ಹೆಬ್ಬಾಲೆ ಪ್ರಥಮ, ಹುದುಗೂರು ತಂಡ ದ್ವೀತಿಯ, ಟೀಮ್ ಕೋಬ್ರನ್ ತೃತೀಯ, ನಾಲ್ಕನೇ ಸ್ಥಾನವನ್ನು ಹುಲುಸೆ ತಂಡ ಪಡೆದುಕೊಂಡಿತು.

ಮಹಿಳೆಯರಿಗಾಗಿ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ಯಡವನಾಡು ಮಹಿಳಾ ತಂಡ ಪ್ರಥಮ, ಬಸವೇಶ್ವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಗ್ರಾಮಸ್ಥರಿಗೆ ಹಗ್ಗಜಗ್ಗಾಟ ಸೇರಿದಂತೆ ಪ್ರಾಥಮಿಕ ಶಾಲೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಗ್ರಾಮದ ಹಿರಿಯ ಪುರುಷರ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶರತ್ ವಹಿಸಿದರು. ಕೃಷಿ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಹುದುಗೂರು ಗ್ರಾಮದ ಟಿ.ಜೆ. ಕಾಳಪ್ಪ, ಮತ್ತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಇನ್ ಯೋಗ ಪ್ರಶಸ್ತಿ ಪಡೆದ ಎಂ.ಎ. ದಿವ್ಯ, ಕ್ರೀಡಾ ಕ್ಷೇತ್ರದಲ್ಲಿ ರೀತೇಶ್ ಅವರನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆಯನ್ನು ಕೂಡಿಗೆ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ನೆರವೇರಿಸಿದರು. ವೇದಿಕೆಯಲ್ಲಿ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಮಂಜುನಾಥ, ದೇವಾಲಯ ಸಮಿತಿಯ ನಿರ್ದೇಶಕ ಪೂವಯ್ಯ, ಯಡವನಾಡು ಜನಾರ್ಧನ್, ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್ ಎಸ್ ರವಿ, ರತ್ನಮ್ಮ, ಯುವಕ ಸಂಘದ ಕಾರ್ಯದರ್ಶಿ ನೌಶಾದ್, ಸೇರಿದಂತೆ ಸಂಘದ ನಿರ್ದೇಶಕರು ಹಾಜರಿದ್ದರು. ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.