ಚೆಟ್ಟಳ್ಳಿ, ಮಾ. ೧ : ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಈ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ ಎಂಬ ಮಾತು ಚೆಟ್ಟಳ್ಳಿ ಗ್ರಾಮ ಸಭೆಯಲ್ಲಿ ಕೇಳಿಬಂತು.
ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಅಧ್ಯಕ್ಷ ಪಿ.ಟಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ವಿವಿಧ ಇಲಾಖಾಧಿಕಾರಿಗಳು ಸೌಲಭ್ಯಗಳನ್ನು ತಿಳಿಸಿದರೆ ಕೆಲವು ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಾದ ಕಾರಣಕ್ಕೆ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಸಾರ್ವಜನಿಕರು ಒತ್ತಾಯಿಸಿದರು. ಸರಕಾರಿ ಜಾಗ ಒತ್ತುವರಿ ಮಾಡಿದವರ ಮೇಲೆ ಈವರೆಗೆ ಕ್ರಮಕೈಗೊಳ್ಳದಿರುವುದು, ಹಂದಿಗೂಡಿನ ಬಗ್ಗೆಗಿನ ದೂರು, ಪಂಚಾಯಿತಿಯ ಅವ್ಯವಸ್ಥೆಯ ಬಗ್ಗೆ ಮುಂದಿನ ದಿನಗಳಲ್ಲಿ ಲೋಕಾಯುಕ್ತರಿಗೆ ದೂರು ನೀಡಲಾಗುವದೆಂದು ಚೆಟ್ಟಳ್ಳಿ ಪ್ರಾ.ಕೃ.ಪ. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದ್ದರು.
ಸುಮಾರು ೫೦-೬೦ ವರ್ಷಗಳಿಂದ ನಿವೇಶನ ರಹಿತ ಹಿಂದುಳಿದ ವರ್ಗದವರಿಗೆ ನಿವೇಶನ ನೀಡಲು ಪಂಚಾಯಿತಿಗೆ ಸಾಧ್ಯವಾಗಿಲ್ಲ, ಸರಕಾರಿ ಒತ್ತುವರಿ ಮಾಡಿದವರ ಜಾಗವನ್ನು ಮುಟ್ಟು ಗೋಲು ಹಾಕಿಕೊಂಡು ವಸತಿ ರಹಿತರಿಗೆ ನೀಡಬೇಕೆಂದು ಒತ್ತಾಯಿಸಿದರು. ಜೆಜೆಎಂ ಯೋಜನೆಯಡಿಯ ಕಾಮಗಾರಿ ಕಳಪೆಯಾಗಿದೆ. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೈದ್ಯರು ಲಭ್ಯವಿರುವುದಿಲ್ಲ. ಚೆಟ್ಟಳ್ಳಿ ಕುಗ್ರಾಮವಾದ್ದರಿಂದ ಆ್ಯಂಬುಲೆನ್ಸ್ ಅವಶ್ಯಕವಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿ ಅವೈಜ್ಞಾನಿಕವಾಗಿದೆ. ದಾನಿಗಳು ಪ್ರಯೋಗಶಾಲೆ ನಿರ್ಮಿಸಿಕೊಟ್ಟರೂ ಸಿಬ್ಬಂದಿ ಇಲ್ಲ. ಆರೋಗ್ಯ ರಕ್ಷಾ ಸಮಿತಿ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮದ್ ರಫಿಕ್ ಒತ್ತಾಯಿಸಿದರು.
ಚೆಟ್ಟಳ್ಳಿಯಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆಯಾದರೂ ಉದ್ಘಾಟನೆಗೆ ಶಾಸಕರನ್ನು ಕಾಯುತ್ತಿರುವ ವಿಷಯ ತೀವ್ರ ಚರ್ಚೆಗೆ ಕಾರಣವಾಯಿತು. ಚೆಟ್ಟಳ್ಳಿ ಪಟ್ಟಣದ ಶೌಚಾಲಯದ ಅವ್ಯವಸ್ಥೆ, ಕಸ ವಿಲೇವಾರಿ ಸಮಸ್ಯೆ, ಕಾಡಾನೆ ತಡೆಗೆ ಕ್ರಮ ಕೈಗೊಳ್ಳಲು ಒತ್ತಾಯ, ವಿದ್ಯುತ್ ಸಮಸ್ಯೆ, ಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯ ಬದಿಯ ಅಪಾಯಕಾರಿ ಮರಗಳ ತೆರವುಗೊಳಿಸದ ಅರಣ್ಯ ಇಲಾಖೆ, ನಡೆಯದ ಹಲವು ಕಾಮಗಾರಿ, ನೆಲ್ಲಿಹುದಿಕೇರಿಯ ಕಾವೇರಿ ನದಿಯಿಂದ ಚೆಟ್ಟಳ್ಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಬಗ್ಗೆ ಭಾರೀ ಚರ್ಚೆಗಳು ನಡೆದವು.
ಚೆಟ್ಟಳ್ಳಿಯಲ್ಲಿ ಕೋಳಿ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಕೋಳಿ ಅಂಗಡಿಗೆ ಟೆಂಡರ್ ನೀಡುವ ಬದಲು ಲೈಸೆನ್ಸ್ ನೀಡಿದರೆ ಪೈಪೋಟಿಯಿಂದಾಗಿ ಕೋಳಿ ಮಾಂಸದ ಬೆಲೆ ಕಡಿಮೆಯಾಗಲಿದೆ ಎಂದು ಹಸೈನ್ ಜುಬೇರ್ ಹಾಗೂ ಮೊಹಮದ್ ಕುಟ್ಟಿ ಅಭಿಪ್ರಾಯಿಸಿದರು.ಕಳೆದ ಬಾರಿ ಚೆಟ್ಟಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ಥವ್ಯ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿಯ ಹಲವು ಸಮಸ್ಯೆಗಳ ಬಗ್ಗೆ ಮನವಿಪತ್ರ ನೀಡಿದರೂ ಈವರೆಗೆ ಒಂದೇ ಒಂದು ಸಮಸ್ಯೆಗೆ ಪರಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಪಶು ವೈದ್ಯಾಧಿಕಾರಿ ಡಾ. ಸಂಜೀವ ಕುಮಾರ್ ಆರ್ ಸಿಂದೆ ನೋಡಲ್ ಅಧಿಕಾರಿಗಳಾಗಿದ್ದು, ಉಪಾಧ್ಯಕ್ಷೆ ಬಿ.ಆರ್. ವಿಶಾಲಾಕ್ಷಿ ಸೇರಿದಂತೆ ಪಂಚಾಯಿತಿ ಸದಸ್ಯರು ವೇದಿಕೆಯಲ್ಲಿದ್ದರು. ಸುಜಾತಾ ಪ್ರಾರ್ಥಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ವಂದಿಸಿದರು.