ಮಡಿಕೇರಿ, ಫೆ. ೨೮: ಚುನಾವಣೆ ಎಂದರೆ ಸಾಕು... ಸ್ಪರ್ಧೆಗೆ ಆಕಾಂಕ್ಷಿಗಳ ದಂಡೇ ಇರುತ್ತದೆ. ಆದರೆ ಇಲ್ಲಿ ಮಾತ್ರ ಚುನಾವಣೆ ಘೋಷಣೆಯಾದರೂ ಸ್ಪರ್ಧೆಗೆ ಯಾರೂ ಮುಂದೆ ಬರುತ್ತಿಲ್ಲ... ಅಚ್ಚರಿಪಡಬೇಡಿ. ಇದು ತಿತಿಮತಿ ಗ್ರಾಮ ಪಂಚಾಯಿತಿಯ ನಾಲ್ಕು ಕ್ಷೇತ್ರಗಳ ಪ್ರಸ್ತುತದ ಪರಿಸ್ಥಿತಿ. ಈ ನಾಲ್ಕು ಕ್ಷೇತ್ರಗಳು ಅಲ್ಲಿನ ಮಡೆನೂರು, ಬೇಗೂರು ಹಾಡಿ ಪ್ರದೇಶಗಳ ವ್ಯಾಪ್ತಿಯನ್ನು ಹೊಂದಿದ್ದು, ಇಲ್ಲಿ ಆದಿವಾಸಿಗಳೇ ವಾಸವಾಗಿದ್ದರು. ಆದರೆ ಕೆಲವಾರು ವರ್ಷಗಳ ಹಿಂದೆ ಇಲ್ಲಿನ ಬಹುತೇಕ ಎಲ್ಲಾ ಜನರೂ ನಾಗಾಪುರ, ಮಾಸ್ತಿಗುಡಿಯಲ್ಲಿನ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊAಡಿದ್ದು, ಅಲ್ಲಿ ನೆಲೆಕಂಡುಕೊAಡಿದ್ದಾರೆ.
ಆದರೆ ಚುನಾವಣಾ ಚೌಕಟ್ಟಿನಲ್ಲಿ ಈಗಲೂ ತಿತಿಮತಿ ಗ್ರಾ.ಪಂ.ಗೆ ಸೇರಿದ ಈ ನಾಲ್ಕು ಕ್ಷೇತ್ರಗಳು ಇನ್ನೂ ಹಾಗೆಯೇ ಮುಂದುವರಿದುಕೊAಡು ಬಂದಿದೆ. ಗ್ರಾ.ಪಂ.ನಲ್ಲಿ ಒಟ್ಟು ೧೫ ಕ್ಷೇತ್ರಗಳು ಬರಲಿದ್ದು, ಈ ನಾಲ್ಕು ಕ್ಷೇತ್ರಗಳು ಮಾತ್ರ ಜನವಸತಿ ಇಲ್ಲದೆ ಖಾಲಿಯಾಗಿವೆ. ೧೧ ಸ್ಥಾನಗಳು ಭರ್ತಿಯಾಗಿದ್ದು, ೪ ಕ್ಷೇತ್ರಗಳು ಹಲವು ವರ್ಷದಿಂದ ಖಾಲಿ ಬಿದ್ದಿವೆಯಾದರೂ, ನಿಯಮಾವಳಿಯಂತೆ ಚುನಾವಣೆ ಘೋಷಣೆಯಾದಾಗ ಇಲ್ಲಿಗೂ ನಿಗದಿಯಾಗುತ್ತದೆ. ಆದರೆ ಸ್ಪರ್ಧಿಸಲು ಜನರಾಗಲಿ, ಮತಚಲಾಯಿಸಲು ನಾಗರಿಕರಾಗಲಿ ಇಲ್ಲದಿರುವುದು ಸೋಜಿಗ.
ಈ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೂ ಮಾಹಿತಿ ರವಾನೆಯಾಗಿದ್ದು, ಆಯೋಗವೂ ಕೂಡ ವಿವರ ಪಡೆದುಕೊಂಡಿದೆ. ಆದರೂ ಮುಂದಿನ ಜನಗಣತಿ-ಕ್ಷೇತ್ರಗಳ ನಿಗದಿಯ ತನಕ ಈ ಪರಿಸ್ಥಿತಿ ಹೀಗೆಯೇ ಮುಂದುವರಿಯಬೇಕಾಗಿದೆ.
ಇದೀಗ ಕೂಡ ಜಿಲ್ಲೆಯಲ್ಲಿ ಗೋಣಿಕೊಪ್ಪಲುವಿನ ಒಂದು ಕ್ಷೇತ್ರ, ನಿಟ್ಟೂರುವಿನ ಒಂದು ಕ್ಷೇತ್ರ, ಎಮ್ಮೆಮಾಡುವಿನ ಎರಡು ಕ್ಷೇತ್ರದೊಂದಿಗೆ ತಿತಿಮತಿ ಪಂಚಾಯಿತಿಯ ಈ ನಾಲ್ಕು ಕ್ಷೇತ್ರಗಳಿಗೂ ಉಪಚುನಾವಣೆ ಘೋಷಣೆಯಾಗಿತ್ತು. ಆದರೆ ಜನರೇ ಇಲ್ಲದ ಕಾರಣ ಮತ್ತೆ ಯಥಾಸ್ಥಿತಿ ಮುಂದುವರಿದಿದೆ... ದಾಖಲೆಗಳ ಪ್ರಕಾರ ಚುನಾವಣೆ ಘೋಷಣೆಯಾಗಿದೆ. ಆದರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇಲ್ಲಿಗೆ ಚುನಾವಣೆ ನಡೆದಿಲ್ಲ ಎಂಬAತೆ ವರದಿಯಾಗಲಿದೆ. ಎರಡು ಎಸ್ಟಿ, ಒಂದು ಎಸ್ಟಿ
(ಮೊದಲ ಪುಟದಿಂದ) ಮಹಿಳೆ ಹಾಗೂ ಒಂದು ಸಾಮಾನ್ಯ ಮೀಸಲಾತಿಯಲ್ಲಿ ಚುನಾವಣೆ ಘೋಷಿಸಲಾಗಿತ್ತು.
ಎಮ್ಮೆಮಾಡುವಿನಲ್ಲಿ ಮತ್ತೊಂದು ಪರಿಸ್ಥಿತಿ
ಪ್ರಸ್ತುತ ಉಪಚುನಾವಣೆ ಘೋಷಣೆಯಾಗಿದ್ದ ಎಮ್ಮೆಮಾಡು ಗ್ರಾ.ಪಂ.ನ ಎರಡು ಕ್ಷೇತ್ರಕ್ಕೂ ಈ ಬಾರಿ ಚುನಾವಣೆ ನಡೆದಿಲ್ಲ. ಇಲ್ಲಿಯೂ ಯಾರೂ ನಾಮಪತ್ರ ಸಲ್ಲಿಸದ ಕಾರಣ ಈ ಪ್ರಕ್ರಿಯೆ ಜರುಗಿಲ್ಲ. ಇಲ್ಲಿನ ಪರಿಸ್ಥಿತಿಗೆ ಕಾರಣ ಬೇರೆ ಇದೆ. ಎಮ್ಮೆಮಾಡು ೧ ಹಾಗೂ ಎಮ್ಮೆಮಾಡು ೨ ಎಂಬ ಕ್ಷೇತ್ರ ಇದಾಗಿದ್ದು, ಇಲ್ಲಿ ಒಂದು ಎಸ್ಸಿ ಮಹಿಳೆ ಹಾಗೂ ಒಂದು ಎಸ್ಟಿ ಮೀಸಲಾತಿ ನಿಗದಿಯಾಗಿದೆ.
ಆದರೆ ಈ ಪಂಚಾಯಿತಿ ವ್ಯಾಪ್ತಿಯಲ್ಲೇ ಈ ಮೀಸಲಾತಿಯಡಿ ಬರುವ ಯಾವುದೇ ಜನರು ವಾಸವಿಲ್ಲ. ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದವರೂ ಯಾರೂ ಇಲ್ಲದಿರುವುದರಿಂದ ಇಲ್ಲಿನ ಎರಡು ಕ್ಷೇತ್ರಗಳೂ ಹಲವು ವರ್ಷಗಳಿಂದ ಖಾಲಿಯಾಗಿಯೇ ಉಳಿದುಕೊಂಡು ಬರುತ್ತಿದೆ. ಪಂಚಾಯಿತಿಯಲ್ಲಿ ಒಟ್ಟು ೯ ಸದಸ್ಯ ಸ್ಥಾನವಿದ್ದು, ೭ ಕ್ಷೇತ್ರಗಳು ಭರ್ತಿಯಾಗಿವೆ. ಎಮ್ಮೆಮಾಡು ಗ್ರಾ.ಪಂ. ಆಗಿ ಏಳು ವರ್ಷಗಳು ಕಳೆದಿದ್ದು, ಅಲ್ಲಿಂದಲೂ ಇದೂ ಕೂಡ ಯಥಾ ಪ್ರಕಾರ ಮುಂದುವರಿದುಕೊAಡು ಬರುತ್ತಿದೆ. -ಶಶಿ