ಕೂಡಿಗೆ, ಫೆ. ೨೮: ಮನೆ - ಮನೆಗೆ ತೆರಳಿ ಚಿನ್ನಾಭರಣಗಳನ್ನು ಪಾಲಿಶ್ ಮಾಡುವುದಾಗಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಚಿನ್ನಾಭರಣಗಳನ್ನು ಪಾಲಿಶ್ ಮಾಡುವುದಾಗಿ ನಂಬಿಸಿ ಚಿನ್ನಾಭರಣಗಳನ್ನು ಪಡೆದು ಪಾಲಿಶ್ ಮಾಡುವ ನೆಪದಲ್ಲಿ ಪಾಲಿಶ್ ಸಾಮಗ್ರಿ ಹಾಗೂ ಆ್ಯಸಿಡ್ ಬಳಸಿ ಸ್ವಲ್ಪ ಮಟ್ಟಿನ ಚಿನ್ನವನ್ನು ಕರಗಿಸಿ ಮೋಸ ಮಾಡುತ್ತಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕುಶಾಲನಗರ ಗ್ರಾಮಾಂತರ ಪೊಲೀಸರ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ.
ಹೆಬ್ಬಾಲೆ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಗಳಾದ ಮೂಲತಃ ಬಿಹಾರ ರಾಜ್ಯದವರಾದ ರಾಜಕುಮಾರ (೨೯), ಪ್ರವೀಣ್ ಕುಮಾರ್ (೩೨), ಲಲನ್ಕುಮಾರ್ (೨೬) ಎಂಬವರುಗಳನ್ನು ಬಂಧಿಸಿ ೧೫ ಗ್ರಾಂ ಚಿನ್ನ ಹಾಗೂ ಪಾಲಿಶ್ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ, ಠಾಣಾಧಿಕಾರಿಗಳಾದ ಪುನೀತ್.ಡಿ.ಎಸ್, ದಿನೇಶ್ ಕುಮಾರ್ ಮತ್ತು ತಂಡದವರು ಕಾರ್ಯಾಚರಣೆೆಯಲ್ಲಿ ಭಾಗವಹಿಸಿದ್ದರು.
ಮನೆ-ಮನೆಗೆ ಚಿನ್ನಾಭರಣಗಳನ್ನು ಪಾಲಿಶ್ ಮಾಡುವುದಾಗಿ ಬರುವ ವ್ಯಕ್ತಿಗಳನ್ನು ನಂಬದೇ ಪಾಲಿಶ್ ಹಾಗೂ ಇತರೆ ಕಾರ್ಯಗಳಿಗೆ ಸ್ಥಳೀಯ ಅಧೀಕೃತ ಚಿನ್ನದ ಅಂಗಡಿಗಳಲ್ಲಿ ಮಾಡಿಸುವಂತೆ ಕೋರಿರುವ ಪೊಲೀಸರು; ಚಿನ್ನಾಭರಣಗಳನ್ನು ಪಡೆದು ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಕರಗಿಸಿ ವಂಚಿಸುವ ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆ ಕೋರಿದ್ದಾರೆ.
-ನಾಗರಾಜಶೆಟ್ಟಿ