ಗೋಣಿಕೊಪ್ಪಲು,ಫೆ.೨೮: ಗೋಣಿಕೊಪ್ಪಲು ಕೀರೆಹೊಳೆ ಹಾಗೂ ಬೈಪಾಸ್ ರಸ್ತೆಯ ಬದಿಯಲ್ಲಿರುವ ಕೈಕೇರಿ ತೋಡು ಪ್ರದೇಶ ನಿರಂತರ ಒತ್ತುವರಿಯಾಗುತ್ತಿರುವ ಹಿನ್ನೆಲೆ ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಸಮ್ಮುಖದಲ್ಲಿ ಅಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಹತ್ವದ ಸಭೆ ಮಾ. ೧ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಜರುಗಲಿದೆ.
ಕಂದಾಯ ಇಲಾಖಾಧಿಕಾರಿಗಳು, ಗೋಣಿಕೊಪ್ಪಲು ಗ್ರಾ.ಪಂ. ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಭೂ ಮಾಪನ ಇಲಾಖಾಧಿಕಾರಿಗಳು, ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಈ ಹಿಂದೆ ತಹಶೀಲ್ದಾರ್ ಯೋಗಾನಂದ ಅವರು ಅಕ್ರಮ ಒತ್ತುವರಿ ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಆತಂಕಕಾರಿಯಾಗಿ ಅಕ್ರಮ ಕಟ್ಟಡಗಳು, ಸೇತುವೆಗಳು ತಲೆ ಎತ್ತುತ್ತಿದ್ದು, ಈ ಬಗ್ಗೆ ಕೂಲಂಕಷ ಚರ್ಚೆ ಹಾಗೂ ಕಾನೂನಾತ್ಮಕ ಕ್ರಮದ ಬಗ್ಗೆ ಮಾತುಕತೆ ನಡೆಯಲಿದೆ.
ಗೋಣಿಕೊಪ್ಪಲು ರಾಜಕಾಲುವೆ ಅಭಿವೃದ್ಧಿಯ ಬಗ್ಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ರೂ.೯ ಕೋಟಿ ವೆಚ್ಚದ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ ರೂ.೬.೫೦ ಕೋಟಿ ಹಣ ಮಂಜೂರಾಗಿದೆ. ಕೀರೆ ಹೊಳೆ ದಡ ಅಭಿವೃದ್ದಿಗೆ ರೂ. ೩.೫೦ ಕೋಟಿ, ಕೈಕೇರಿ ತೋಡು ರಾಜ ಕಾಲುವೆ ನಿರ್ಮಾಣಕ್ಕೆ ರೂ. ೩ ಕೋಟಿ ಅನುದಾನ ಬಿಡುಗಡೆಯಾಗಿದೆ. ಗೋಣಿಕೊಪ್ಪಲು ಜಲಮೂಲ ಗಡಿಗುರುತು ನಂತರವೇ ಕಾಮಗಾರಿ ಆರಂಭಿಸಬೇಕಾಗಿದೆ. ಈ ಬಗ್ಗೆ ಭೂ ಮಾಪನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಲಮೂಲ ಸರಹದ್ದು ಗುರುತಿಸುವ ಕೆಲಸ ಮೊದಲು ಆರಂಭಿಸಬೇಕಾಗಿದೆ.