ಶ್ರೀಮಂಗಲ, ಫೆ. ೨೮: ಪೊನ್ನಂಪೇಟೆ ತಾಲೂಕು ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರದಿAದ ವಿದ್ಯುತ್ ಸಂಪರ್ಕ ನಿರಂತರ ವ್ಯತ್ಯಯ ಉಂಟಾಗುತ್ತಿದೆ, ಕಾಫಿಗೆ ವಿದ್ಯುತ್ ಪಂಪ್‌ಸೆಟ್ ಮೂಲಕ ನೀರು ಒದಗಿಸಲು, ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ವ್ಯಾಸಂಗಕ್ಕೆ ತೊಂದರೆಯಾಗಿದೆ. ವಾರದೊಳಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ನೀಡದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್, ಗ್ರಾ.ಪಂ. ಸದಸ್ಯರು ಮತ್ತು ಬೆಳೆಗಾರರು ಎಚ್ಚರಿಸಿದ್ದಾರೆ.

ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು, ರಾಜ್ಯದಲ್ಲೇ ಅತಿ ದೊಡ್ಡ ವಿಸ್ತೀರ್ಣದ ಶ್ರೀಮಂಗಲ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸ್ಥಗಿತ ಮತ್ತು ಅಡಚಣೆ ಉಂಟಾಗುತ್ತಿದೆ. ಶ್ರೀಮಂಗಲ ವ್ಯಾಪ್ತಿಗೆ ೧೪೦೦ ಟಿ.ಸಿ. ಇದ್ದರೂ ೯ ಲೈನ್‌ಮ್ಯಾನ್ ಇದ್ದಾರೆ. ೫೦೦ ಟಿ.ಸಿ. ಹೊಂದಿರುವ ಕುಶಾಲನಗರ ವ್ಯಾಪ್ತಿಗೆ ೩೦ ಲೈನ್‌ಮ್ಯಾನ್ ಇದ್ದಾರೆ. ಸಿದ್ದಾಪುರ ವ್ಯಾಪ್ತಿಗೆ ೨೦೦ ಟಿ.ಸಿ. ಇದ್ದು ೯ ಲೈನ್‌ಮ್ಯಾನ್ ಇದ್ದಾರೆ. ಶ್ರೀಮಂಗಲ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಸುಧಾರಣೆಗೆ ಮೇಲ್ಮಟ್ಟದ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಮನವರಿಕೆ ಮಾಡಿದ್ದರೂ, ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕಾಫಿಗೆ ನೀರು ಹಾರಿಸುವ ಸಮಯದಲ್ಲಿಯೂ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ಶ್ರೀಮಂಗಲದಲ್ಲಿ ೬೬ ಕೆ.ವಿ. ವಿದ್ಯುತ್ ಕೇಂದ್ರ ಸೇವೆಗೆ ಲಭ್ಯವಾಗಿಲ್ಲ. ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಇಲಾಖೆಯ ಕೆಲವು ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವ ಬದಲು ಖಾಸಗಿ ಗುತ್ತಿಗೆದಾರರು ಮಾಡಿಕೊಡಬೇಕಾದ ಹೊಸ ಪಂಪ್‌ಸೆಟ್ ಸಂಪರ್ಕ ಟಿ.ಸಿ. ಅಳವಡಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ ಶ್ರೀಮಂಗಲ ಮಾರ್ಗವನ್ನು ಬೇರೆ ವ್ಯಾಪ್ತಿ ಸಂಪರ್ಕಿಸಿದ ಪರಿಣಾಮ ವಿದ್ಯುತ್ ವೋಲ್ಟೇಜ್ ಸಮಸ್ಯೆ ಉಂಟಾಗಿದೆ ಎಂದು ಮುತ್ತಪ್ಪ ಆರೋಪಿಸಿದರು.

ಶ್ರೀಮಂಗಲ ಗ್ರಾ.ಪಂ. ಸದಸ್ಯ ಚೋನಿರ ಕಾಳಯ್ಯ ಮಾತನಾಡಿ, ಶ್ರೀಮಂಗಲ ವ್ಯಾಪ್ತಿಯಲ್ಲಿ ಪಂಪು ಸೆಟ್ಟುಗಳಿಗೆ ಹೊಸ ಸಂಪರ್ಕ ನೀಡಿದ್ದು, ಅದಕ್ಕೆ ಅಧಿಕೃತ ಸಂಖ್ಯೆ ನೀಡಿಲ್ಲ. ನನ್ನ ಹೆಸರಿನಲ್ಲಿ ಟಿ.ಸಿ. ಮತ್ತು ವಿದ್ಯುತ್ ಕಂಬ ಮಂಜೂರಾಗಿದ್ದು, ಬಿಲ್ ಬರುತ್ತಿದೆ, ಆದರೆ ನನಗೆ ಯಾವುದೇ ಸಂಪರ್ಕ ನೀಡಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ಬೆಳೆಗಾರರುಗಳಾದ ಚೆಟ್ಟಂಡ ರಘು, ಕಳ್ಳಂಗಡ ಮೋಹನ್ ಭೀಮಯ್ಯ, ಬೋಡಂಗಡ ನರೇಂದ್ರ ಹಾಜರಿದ್ದರು.