ಮಡಿಕೇರಿ, ಫೆ. ೨೮: ಜೆಡಿಎಸ್‌ನ ಪಂಚರತ್ನ ಯೋಜನೆ ಬಗ್ಗೆ ಮನೆ ಮನೆಗೆ ಮಾಹಿತಿ ನೀಡುವ ಸಲುವಾಗಿ ರಾಜ್ಯಾದ್ಯಂತ ಮನೆ ಮನೆಗೆ ಕುಮಾರಣ್ಣ ಎಂಬ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಅದರ ಅಂಗವಾಗಿ ಮಡಿಕೇರಿಯಲ್ಲಿ ಜಿಲ್ಲಾ ಜೆಡಿಎಸ್‌ನಿಂದ ಮನೆ ಮನೆಗೆ ತೆರಳಿ ಪಂಚರತ್ನ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಜೆಡಿಎಸ್ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಸಮ್ಮುಖದಲ್ಲಿ ನಗರದ ೧೦ನೇ ವಾರ್ಡ್ನಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ರಾಜ್ಯಾದ್ಯಂತ ಏಕಕಾಲದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಕೊಡಗಿನಲ್ಲಿಯೂ ಪ್ರತಿ ತಾಲೂಕು ಮತ್ತು ಹೋಬಳಿ ಘಟಕಗಳಿಂದ ಮನೆ ಮನೆಗೆ ತೆರಳಿ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾದ ಪಂಚರತ್ನ ಯೋಜನೆ ಬಗ್ಗೆ ಮನೆ ಮನೆಗೆ ಮಾಹಿತಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಜೆಡಿಎಸ್ ಜಿಲ್ಲಾ ಉಸ್ತುವಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಈ ಬಾರಿ ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆ ಯನ್ನು ರಾಷ್ಟಿçÃಯ ಪಕ್ಷಗಳ ಪ್ರಣಾಳಿಕೆ ಬಿಡುಗಡೆಗೂ ಮೊದಲೇ ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಿ.ಬಿ. ಪುಷ್ಪಾವತಿ ರಮೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ನಗರಸಭೆ ಸದಸ್ಯ ಮುಸ್ತಫಾ, ನಗರಸಭೆ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.