ಮಡಿಕೇರಿ, ಫೆ. ೨೮: ಭಾರತೀಯ ರೆಡ್‌ಕ್ರಾಸ್‌ನ ಕೊಡಗು ಘಟಕದ ವತಿಯಿಂದ ಸುಸಜ್ಜಿತ ವೈದ್ಯಕೀಯ ತಪಾಸಣಾ ಬಸ್‌ನ್ನು ತಾ. ೨ ರಂದು ಲೋಕಾರ್ಪಣೆ ಮಾಡಲಾಗುತ್ತದೆ.

ಮಡಿಕೇರಿಯ ಗಾಂಧಿ ಮಂಟಪದ ಮುಂಬದಿ ಬೆಳಿಗ್ಗೆ ೯ ಗಂಟೆಗೆ ಆಯೋಜಿತ ಕಾರ್ಯಕ್ರಮದಲ್ಲಿ ರೂ. ೭೫ ಲಕ್ಷ ಮೌಲ್ಯದ ಸುಸಜ್ಜಿತ ಮೊಬೈಲ್ ಘಟಕವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

ರೆಡ್‌ಕ್ರಾಸ್ ಸಭಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎನ್. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುAಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಾರ್ಯಪ್ಪ, ರೆಡ್‌ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ. ರವೀಂದ್ರ ರೈ, ಉಪಾಧ್ಯಕ್ಷ ಅನಿಲ್ ಎಚ್.ಟಿ., ಕಾರ್ಯದರ್ಶಿ ಮುರಳೀಧರ್ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಎಂದು ರೆಡ್‌ಕ್ರಾಸ್ ಪ್ರಕಟಣೆ ತಿಳಿಸಿದೆ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಕೊಡಗು ರೆಡ್‌ಕ್ರಾಸ್ ಘಟಕದ ಕೋರಿಕೆಯನ್ವಯ ರೂ. ೭೫ ಲಕ್ಷ ಮೌಲ್ಯದ ಸುಸಜ್ಜಿತವಾದ ವೈದ್ಯಕೀಯ ತಪಾಸಣೆಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಆಸ್ಪತ್ರೆಯನ್ನು ಕೊಡಗು ಜಿಲ್ಲೆಗೆ ರವಾನಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಮೊಬೈಲ್ ಘಟಕವು ಗ್ರಾಮೀಣ ಭಾಗಗಳೂ ಸೇರಿದಂತೆ ಜಿಲ್ಲೆಯಾದ್ಯಂತ ಜನತೆಗೆ ಸಹಕಾರಿಯಾಗಲಿದೆ ಎಂದು ರೆಡ್‌ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ ಮಾಹಿತಿ ನೀಡಿದ್ದಾರೆ.