ವೀರಾಜಪೇಟೆ, ಫೆ. ೨೭: ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್.ಸಿ.ಸಿ. ಘಟಕ, ಇಕೋ ಕ್ಲಬ್ ಹಾಗೂ ಸ್ಕೌಟ್ ಗೈಡ್ಸ್ ಘಟಕಗಳ ಸಹಯೋಗದಲ್ಲಿ ಸೈಕಲ್ ಜಾಥಾ ಹಾಗೂ ಸ್ವಚ್ಛತಾ ಅಭಿಯಾನ ಇತ್ತೀಚೆಗೆ ನಡೆಯಿತು.
ಜಾಥಾಕ್ಕೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಕರ್ ನಗರದ ಗಡಿಯಾರ ಕಂಬದ ಬಳಿ ಚಾಲನೆ ನೀಡಿದರು. ಸೈಕಲ್ ಜಾಥಾವು ಹೆಗ್ಗಳ ಗ್ರಾಮದ ಸ್ನೇಹಭವನ ಅನಾಥಾಶ್ರಮದ ತನಕ ನಡೆಯಿತು.
ಮಾರ್ಗ ಮಧ್ಯೆ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಸ್ನೇಹ ಭವನ ಅನಾಥಾಶ್ರಮದಲ್ಲೂ ಸ್ವಚ್ಛತೆಯನ್ನು ನೆರವೇರಿಸಿದರು. ಅಲ್ಲಿಯೇ ಆಹಾರ ತಯಾರಿಸಿ ವೃದ್ಧರಿಗೆ ಬಡಿಸಿದರು ಮತ್ತು ಮನೋರಂಜನ ಕಾರ್ಯಕ್ರಮ ನೀಡಿದರು.
ಈ ಸಂದರ್ಭ ವೀರಾಜಪೇಟೆ ನರ್ಸಿಂಗ್ ಹೋಮ್ನ ವೈದ್ಯೆ ಡಾ. ಫಾತಿಮಾ ಕಾರ್ಯಪ್ಪ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದರು.
ಒಟ್ಟು ೬೦ ವಿದ್ಯಾರ್ಥಿಗಳಿದ್ದ ಈ ತಂಡದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ, ನೈರ್ಮಲ್ಯ ಹಾಗೂ ಇಂಧನ ಉಳಿತಾಯದ ಪ್ರಾಮುಖ್ಯತೆಯನ್ನು ಅರಿತರು. ಈ ಸಂದರ್ಭ ಎನ್.ಸಿ.ಸಿ. ಅಧಿಕಾರಿ ಅಬ್ದುಲ್ ಮುನೀರ್, ಸ್ಕೌಟ್ ಗೈಡ್ ಸಂಚಾಲಕಿ ಸಹನ ಹಾಗೂ ಶಿಕ್ಷಕರುಗಳು ಉಪಸ್ಥಿತರಿದ್ದರು.