ವೀರಾಜಪೇಟೆ, ಫೆ. ೨೭: ಕಾರ್ಯಸೂಚಿಯಲ್ಲಿ ಇಲ್ಲದ ವಿಚಾರ ಪ್ರಸ್ತಾಪಗೊಂಡು ಗದ್ದಲ ಏರ್ಪಟ್ಟು ವಿರೋಧ ಪಕ್ಷ ಹಾಗೂ ಪಕ್ಷೇತರ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ವೀರಾಜಪೇಟೆ ಪುರಸಭೆ ಮಾಸಿಕ ಸಭೆಯಲ್ಲಿ ನಡೆಯಿತು.

ಅಧ್ಯಕ್ಷೆ ಸುಶ್ಮೀತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ಯಾನಗರದಲ್ಲಿ ಸೆಂಟ್ರಲ್ ‘ಡಿಸ್ಟಿçಕ್ಟ್ ಇಂಡಿಯನ್ ಅಸೆಂಬ್ಲಿಸ್ ಆಫ್ ಗಾಡ್’ ಎಂಬ ಸಂಸ್ಥೆಯ ಹೆಸರಿನಲ್ಲಿ ಒಂದು ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಆ ಪತ್ರದ ಬಗ್ಗೆ ಏನು ಕ್ರಮಕೈಗೊಂಡಿದ್ದಿರಾ ಎಂದು ಸದಸ್ಯ ಅಗಸ್ಟಿನ್ ಬೆನ್ನಿ ಪ್ರಸ್ತಾಪಿಸಿದಾಗ ಮುಖ್ಯಾಧಿಕಾರಿ ಚಂದ್ರಕುಮಾರ್ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲು ವಿರೋಧವಿದೆ. ಲಿಖಿತವಾಗಿ ದೂರು ಸಲ್ಲಿಸಿದ್ದಾರೆ ಎಂದು ಸಭೆಗೆ ತಿಳಿಸಿದರು. ಈ ಸಂದರ್ಭ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೇ ತೀವ್ರ ಮಾತಿನ ಚಕಮಕಿ ನಡೆಯಿತು.

ವಿರೋಧ ಪಕ್ಷದ ಸದಸ್ಯರು ಪ್ರಾರ್ಥನಾ ಮಂದಿರಕ್ಕೆ ಯಾರು ವಿರೋಧ ವ್ಯಕ್ತಪಡಿಸಿದ್ದಾರೆ ಅದನ್ನು ಸಭೆಗೆ ತಿಳಿಸಬೇಕು ಎಂದು ಪಟ್ಟು ಹಿಡಿದಾಗ ಮುಖ್ಯಾಧಿಕಾರಿ ವಿಶ್ವ ಹಿಂದೂ ಪರಿಷತ್‌ನ ತಾಲೂಕು ಅಧ್ಯಕ್ಷ ಬಿ.ಎಂ. ಕುಮಾರ್ ಅವರ ಪತ್ರವನ್ನು ತೋರಿಸಿದರು. ಈ ವೇಳೆ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಈ ವೇಳೆ ಅಧ್ಯಕ್ಷರು ಅಜೆಂಡದಲ್ಲಿ ಪ್ರಾರ್ಥನಾ ಮಂದಿರದ ವಿಚಾರ ಇಲ್ಲ. ಇದರ ಬಗ್ಗೆ ಯಾಕೆ ಚರ್ಚೆ ಮಾಡುತ್ತಿರಾ ಎಂದು ಪ್ರಶ್ನಿಸಿ

(ಮೊದಲ ಪುಟದಿಂದ) ಸಭೆ ನಡೆಸಲು ಅವಕಾಶ ನೀಡಿ ಎಂದು ಕೇಳಿಕೊಂಡರು ಕೂಡ ವಿರೋಧ ಪಕ್ಷದ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಆಡಳಿತ ಪಕ್ಷದ ಸದಸ್ಯರು ಅವರ ಅನುಪಸ್ಥಿತಿಯಲ್ಲಿ ಹಸಿಮೀನು, ಹಂದಿಮಾAಸ ಮಾರುಕಟ್ಟೆ, ವಾಹನ ಸುಂಕ ಎತ್ತಾವಳಿ, ಒಣಮೀನು ವಿಚಾರ ದಲ್ಲಿ ಚರ್ಚೆ ನಡೆಸಿ ಅಂಗೀಕರಿಸಿದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆಡಳಿತಾಧಿಕಾರಿ ಡಾ. ಶ್ರೀನಿವಾಸ್ ರಕ್ಷಾ ಸಮಿತಿ ಸದಸ್ಯರನ್ನು ಕಡೆಗಣಿಸಿ ಏಕ ಪಕ್ಷಿಯವಾಗಿ ನಡೆÀದುಕೊಳ್ಳುತ್ತಿದ್ದಾರೆ. ಶವಾಗಾರದಲ್ಲಿ ಶವಗಳನ್ನು ಇಡಲು ಶೀಥಲಿಕರಣದ ವ್ಯವಸ್ಥೆ ಇಲ್ಲ ಎಂದು ಸದಸ್ಯ ಮಹಮದ್ ರಾಫಿ ದೂರಿದರು. ಇದಕ್ಕೆ ಧನಿಗೂಡಿಸಿದ ಸದಸ್ಯ ರಾಜೇಶ್ ಆಡಳಿತಾಧಿಕಾರಿ ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ. ಐದು ರೂಪಾಯಿ ಇದ್ದ ಹೋರರೋಗಿಗಳ ಚೀಟಿಗೆ ೧೦ ರೂಪಾಯಿ ಮಾಡಿದ್ದಾರೆ. ಸಂಜೆ ೬ ಗಂಟೆಯ ಮೇಲೆ ಆಸ್ಪತ್ರೆಗೆ ಹೋದ ರೋಗಿಗಳನ್ನು ನೇರವಾಗಿ ಮಡಿಕೇರಿಗೆ ಕಳುಹಿಸಲಾಗುತ್ತಿದೆ. ಶನಿವಾರ-ಭಾನುವಾರ ಯಾವುದೇ ವೈದ್ಯರಿರುವುದಿಲ್ಲ. ಇರುವ ವೈದ್ಯರುಗಳು ಉಡಾಫೆಯಿಂದ ವರ್ತಿಸುತ್ತಾರೆ ಎಂದು ಆರೋಪಿಸಿದರು.

ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ ಆಸ್ಪತ್ರೆಯಲ್ಲಿ ಉಳ್ಳವರು ಮತ್ತು ರಾಜಕೀಯ ಪ್ರಭಾವ ಇರುವವರಿಗೆ ಮಾತ್ರ ಚಿಕಿತ್ಸೆ ಲಭಿಸುತ್ತಿದೆ. ಮೆಡಿಕಲ್ ಕಿಟ್‌ಗಳನ್ನು ತರಲು ರೋಗಿಗಳಿಗೆ ಹೇಳುತ್ತಾರೆ. ಸ್ಕಾö್ಯನಿಂಗ್, ಎಕ್ಸರೆ ಉಪಕರಣಗಳಿದ್ದರೂ ಹೊರಗಡೆಗೆ ಕಳುಹಿಸುತ್ತಿದ್ದಾರೆ. ಮಹಿಳಾ ವೈದ್ಯರೊಬ್ಬರು ಮೊಬೈಲ್ ನೋಡಿಕೊಂಡು ರೋಗಿಗಳನ್ನು ಪರೀಕ್ಷಿಸುತ್ತಾರೆ. ಒಂದು ವಾರದಲ್ಲಿ ವ್ಯವಸ್ಥೆ ಸರಿಯಾಗದಿದ್ದರೆ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದಾಗ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ನಡೆಸುವ ಪ್ರತಿಭಟನೆಗೆ ಆಡಳಿತ ಪಕ್ಷದ ಸದಸ್ಯರು ನಾವು ಕೈ ಜೋಡಿಸುತ್ತೇವೆ ಎಂದು ಹೇಳಿದರು.

ಸದಸ್ಯ ರಾಜೇಶ್ ಮಾತನಾಡಿ ಪಟ್ಟಣದಲ್ಲಿ ಮಿತಿ ಮೀರಿದ ಟ್ರಾಫಿಕ್ ಸಮಸ್ಯೆ ಇದ್ದು ದೊಡ್ಡಟ್ಟಿ ಚೌಕಿಯಲ್ಲಿ ಬಸ್‌ಗಳು ನಿಲ್ಲುವುದರಿಂದ ಬೆಳಿಗ್ಗೆ ಹಾಗೂ ಸಂಜೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಬಸ್‌ಗಳನ್ನು ಅಮ್ಮತ್ತಿ ರಸ್ತೆಯಲ್ಲಿ ನಿಲುಗಡೆಗೊಳಿಸುವಂತೆ ಕೋರಿದರು.

ವೀರಾಜಪೇಟೆಯಲ್ಲಿ ಉತ್ತಮ ಗುಣಮಟ್ಟದ ಗಾಂಜಾ ಸಿಗುತ್ತದೆ ಎಂದು ನನ್ನ ಹೊರ ಜಿಲ್ಲೆಯ ಸ್ನೇಹಿತರು ಕೇಳುತ್ತಾರೆ. ಇದರಿಂದ ನಮಗೆ ಮುಜುಗರವಾಗುತ್ತಿದೆ ಎಂದು ಹೇಳಿದಾಗ ಈ ವಿಚಾರದಲ್ಲಿ ಸದಸ್ಯೆ ದೇಚಮ್ಮ, ರಂಜಿ ಪೂಣಚ್ಚ, ಮತಿನ್, ಪ್ರಥ್ವಿನಾಥ್ ಧ್ವನಿಗೂಡಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ವೃತ್ತ ನಿರೀಕ್ಷಕರಾದ ಶಿವರುದ್ರ ಪೊಲೀಸ್ ಇಲಾಖೆ ಗಾಂಜಾ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡು ವ್ಯಾಪಕ ಕಾರ್ಯಾಚರಣೆ ಮಾಡಿ ಅನೇಕರನ್ನು ಜೈಲಿಗೆ ಅಟ್ಟಲಾಗಿದೆ. ಮೈಸೂರು ಕಡೆಯಿಂದ ಗಾಂಜಾ ಪಟ್ಟಣಕ್ಕೆ ಬರುತ್ತಿದೆ. ಕಾನೂನಿನಲ್ಲಿರುವಂತೆ ಒಂದು ಕೆ.ಜಿ.ಗಿಂತ ಕಡಿಮೆ ಗಾಂಜಾ ಸಿಕ್ಕಿದರೆ ಆರೋಪಿಗಳು ಜಾಮೀನಿನ ಮೇಲೆ ಹೊರ ಬರುತ್ತಾರೆ. ಈ ನಿಟ್ಟಿನಲ್ಲಿ ರೌಡಿ ಪಟ್ಟಿಗೆ ಸೇರಿಸುವುದು ಗಡಿಪಾರು ಮಾಡುವುದು ಮಾಡಬಹುದು ಎಂದಾಗ ಸಭೆ ಒಕ್ಕೊರಲಿನಿಂದ ಅಂತಹವರನ್ನು ಗಡಿಪಾರು ಮಾಡಿ ಎಂದು ಹೇಳಿದರು. ಟ್ರಾಫಿಕ್ ಬಗ್ಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಪುರಸಭೆ ಕೂಡ ಇದರಲ್ಲಿ ಕೈಜೋಡಿಸಬೇಕು. ಅಂಗಡಿ ಮುಂದೆ ಚೈನು ಅಥವಾ ಕಬ್ಬಿಣದ ರಾಡುಗಳನ್ನು ಇಟ್ಟಿರುವುದನ್ನು ತೆರವುಗೊಳಿಸಿ ಅಂಗಡಿಯವರೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಫುಟ್‌ಪಾತ್ ತೆರವು ವಿಚಾರದಲ್ಲಿ ಪುರಸಭೆ ಸಹಕರಿಸಬೇಕು ಎಂದು ಹೇಳಿದರು.

ಆರ್ಜಿ ಬಳಿ ೯ ಕೋಟಿ ರೂ. ವೆಚ್ಚದಲ್ಲಿ ಕೇರಳ ರಾಜ್ಯ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸುತ್ತಿದೆ ಎಂದು ಸದಸ್ಯ ಮಹಮದ್ ರಾಫಿ ಪ್ರಸ್ತಾಪಿಸಿ ಲೋಕೋಪಯೊಗಿ ಇಲಾಖೆ ಈ ರಸ್ತೆಯಲ್ಲಿ ೯ ಕೋಟಿಯ ಲೂಟಿ ಮಾಡುತ್ತಿದ್ದು, ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ಅಂಚಿನಲ್ಲಿಯೇ ಮರಗಳಿದ್ದು ಅದನ್ನು ತೆರವುಗೊಳಿಸದೆ ಕಾಂಕ್ರಿಟ್ ಚರಂಡಿ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದಾಗ ಲೋಕೋಪಯೋಗಿ ಅಭಿಯಂತರ ಶಹಬಾಜ್ ಅಂಕಿ ಅಂಶಗಳ ಬಗ್ಗೆ ಸಮರ್ಪಕ ಉತ್ತರ ನೀಡಲು ವಿಫಲರಾದರು.

ಬೇತ್ರಿ ಕುಡಿಯುವ ನೀರು ಪೂರೈಕೆ ಆಗುತ್ತಿರುವ ಘಟಕಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ಪುರಸಭೆ ಲಕ್ಷಾಂತರ ರೂ. ಡೀಸೆಲ್‌ಗೆ ವ್ಯಯ ಮಾಡುತ್ತಿದ್ದು ಒಂದು ತಿಂಗಳಲ್ಲಿಯೆ ೧೨೦೦ ಲೀಟರ್ ಡೀಸೆಲ್ ವ್ಯಯವಾಗಿದೆ. ಇದರಿಂದ ಪುರಸಭೆಗೆ ಆರ್ಥಿಕ ಹೊರೆಯಾಗಿದೆ ಎಂದು ಸದಸ್ಯ ರಾಜೇಶ್ ಹೇಳಿದಾಗ ನೀರು ಪೂರೈಕೆ ಸಿಬ್ಬಂದಿ ಇರ್ಫಾನ್ ಮಾಹಿತಿ ನೀಡಿ, ನೀರು ವೀರಾಜಪೇಟೆ ಕಡೆಯಿಂದ ನಮಗೆ ಸಮರ್ಪಕ ವಿದ್ಯುತ್ ಇರುವುದಿಲ್ಲ. ಮತ್ತೊಂದೆಡೆ ಮೂರ್ನಾಡು ಕಡೆಯಿಂದ ವಿದ್ಯುತ್ ಇರುವುದಿಲ್ಲ. ಇದರಿಂದ ಹೆಚ್ಚು ಡೀಸೆಲ್ ಖರ್ಚು ಬರುತ್ತಿದೆ ಎಂದು ವಿದ್ಯುತ್ ವ್ಯತ್ಯಯದ ಬಗ್ಗೆ ಲಾಗ್ ಪುಸ್ತಕದಲ್ಲಿ ನಿತ್ಯ ನಮೂದಿಸುತ್ತಿರುವುದಾಗಿ ಹೇಳಿದರು. ಇದಕ್ಕೆ ಉತ್ತರಿಸಿದ ಸೆಸ್ಕ್ ಕಿರಿಯ ಅಭಿಯಂತರ ಕರೋಟಿರ ದಿಲೀಪ್ ವಿದ್ಯುತ್ ಪೂರೈಕೆಯಲ್ಲಿ ಅಂತಹ ವ್ಯತ್ಯಯ ಆಗುತ್ತಿಲ್ಲ. ಕೆಲವೊಂದು ಸಮಯದಲ್ಲಿ ತಾಂತ್ರಿಕ ಅಡಚಣೆ ಇರುತ್ತದೆ. ಸಾಧ್ಯವಾದಷ್ಟು ವಿದ್ಯುತ್ ಪೂರೈಸಲು ಶ್ರಮಿಸುತ್ತೇವೆ ಎಂದರು.

ಸಭೆಯಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.