ವೀರಾಜಪೇಟೆ, ಫೆ. ೨೭: ಕೇಂದ್ರ ಮತ್ತು ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಕೊಡಗನ್ನು ಕಡೆಗಣಿಸಿದೆ; ಕಾರ್ಮಿಕರಿಗೆ ಮತ್ತು ರೈತರಿಗೆ ಪ್ರತ್ಯೇಕ ಯೋಜನೆಗಳನ್ನು ಘೋಷಿಸಿಲ್ಲ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಇಲ್ಲಿನ ಗಡಿಯಾರ ಕಂಬದ ಬಳಿ ಜನಾಂದೋಲನ ಕಾರ್ಯಕ್ರಮ ನಡೆಯಿತು.

ಜನಾಂದೋಲನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ ಕೊಡಗಿನಲ್ಲಿ ಕೋವಿಡ್ ನಂತರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು ಕೇಂದ್ರ ಸರಕಾರದ ಹಣಕಾಸು ಮಂತ್ರಿ ಮತ್ತು ರಾಜ್ಯದ ಮುಖ್ಯ ಮಂತ್ರಿಗಳು ಕೊಡಗನ್ನು ಕಡೆಗಣಿಸಿದ್ದಾರೆ ಎಂದು ದೂರಿದರು. ಸಿಪಿಐ(ಎಂ) ಜಿಲ್ಲಾ ಸಮಿತಿಯ ಎ.ಸಿ.ಸಾಬು ಮಾತನಾಡಿ ಬಜೆಟ್‌ನಲ್ಲಿ ಕೊಡಗಿಗೆ ರಸ್ತೆ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗಿದ್ದು ಇನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲದಂತಾಗಿದೆ ಎಂದರು.

ವೀರಾಜಪೇಟೆ ಸಿಪಿಐಎಂ ಕಾರ್ಯದರ್ಶಿ ಶಾಜಿ ರಮೇಶ್ ಮಾತನಾಡಿ ಕೇಂದ್ರ ಸರಕಾರದ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಚಾರ ಸಮಿತಿಯ ಹೆಚ್.ಪಿ.ರಮೇಶ್, ಸಿ.ಐ.ಟಿ.ಯು ಜಿಲ್ಲಾ ಅಧ್ಯಕ್ಷ ಭರತ್, ಸಿ.ಪಿ.ಐ.(ಎಂ) ಜಿಲ್ಲಾ ಸಮಿತಿಯ ಮಹದೇವ, ಎನ್.ಡಿ. ಕುಟ್ಟಪ್ಪ, ಕೆ.ಎಸ್. ರತೀಶ್, ಖಾಲಿದ್, ಬಾಬುಟಿ, ಪದ್ಮಿನಿ ಮತ್ತಿತರರು ಹಾಜರಿದ್ದರು.