ಶ್ರೀಮAಗಲ, ಫೆ. ೨೭: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಅಸ್ಸಾಂ ಮೂಲದ ಕಾರ್ಮಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ಶ್ರೀಮಂಗಲ ಪೊಲೀಸರು ಬಂಧಿಸಿದ್ದಾರೆ.

ಕಾಕೂರು ಗ್ರಾಮದ ಮೇಚೀರ ಚಿಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ ರಜೀಬ್ (೨೭) ಬಂಧಿತ ಆರೋಪಿ. ಮೇಚೀರ ಚಿಪ್ಪ ತಮ್ಮ ಸಂಬAಧಿಕರಾದ ದಿವಂಗತ ಸತೀಶ್ ಅವರ ಪತ್ನಿ ಚೋಕೀರ ಕವಿತಾ ಅವರಲ್ಲಿಗೆ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದ್ದರು. ಕವಿತಾ ಅವರ ಮನೆ ಪರಿಚಯವಿದ್ದ ಕಾರಣ ಆರೋಪಿ ರಜೀಬ್ ಕವಿತಾ ಅವರ ಮನೆಗೆ ತೆರಳಿದ್ದು, ಕಾಫಿ ಕೇಳಿ ಕುಡಿದಿದ್ದಾನೆ. ನಂತರ ಹಣ ಕೇಳಿದ್ದು, ಕವಿತಾ (೪೯) ನೀಡದಿದ್ದಾಗ ಕವಿತಾ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕವಿತಾ ಅವರಿಗೆ ತಲೆ ಹಾಗೂ ಮುಖದ ಭಾಗಕ್ಕೆ ತೀವ್ರ ಗಾಯವಾಗಿದೆ.

ಕವಿತಾ ಅವರನ್ನು ಶ್ರೀಮಂಗಲ ಕರುಣಾ ಟ್ರಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.