ಮಡಿಕೇರಿ, ಫೆ. ೨೭: ಸವಿತಾ ಸಮಾಜವು ಅತ್ಯಂತ ಶ್ರೀಮಂತ ಪರಂಪರೆ ಹೊಂದಿದ್ದು, ಆ ನಿಟ್ಟಿನಲ್ಲಿ ಸವಿತಾ ಮಹರ್ಷಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸವಿತಾ ಸಮಾಜವು ಸಮಾಜದಲ್ಲಿ ವಿಶಿಷ್ಟ ಇತಿಹಾಸ ಹೊಂದಿದೆ. ಶಿವನ ದಿವ್ಯದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಅವರು ಪುರಾಣ ಗ್ರಂಥದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ ಎಂದು ಶಾಸಕರು ಹೇಳಿದರು.

ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ದೊರೇಶ್ ಮಾತನಾಡಿ, ಅಪಾರ ಜ್ಞಾನ ಭಂಡಾರ ಹೊಂದಿದ್ದ ಸವಿತಾ ಮಹರ್ಷಿ ಅವರು ನಾಲ್ಕನೇ ವೇದವಾದ ಸಾಮವೇದ ರಚಿಸಿದ್ದಾರೆ. ಇವರ ಮಗಳಾದ ಗಾಯತ್ರಿ ದೇವಿಯು ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದರು.

ತಾಲೂಕು ಸವಿತಾ ಸಮಾಜದ ಕ್ರೀಡಾ ಅಧ್ಯಕ್ಷ ಮಧು ಚೆಟ್ಟಿಮಾನಿ, ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷÀ ಶಿವಾಜಿ, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಮಧು ಎಂ.ಟಿ. (ಮಡಿಕೇರಿ), ಶಿವಣ್ಣ (ಸೋಮವಾರಪೇಟೆ), ಜಗದೀಶ ಭಂಡಾರಿ (ಕುಶಾಲನಗರ), ದೇವರಾಜ್(ವಿರಾಜಪೇಟೆ), ಮಹಿಳಾ ಘಟಕದ ಅಧ್ಯಕ್ಷೆ ವಸಂತಿ ಆರ್.ಬಿ., ತಾ. ಸವಿತಾ ಸಮಾಜದ ನಗರಾಧ್ಯಕ್ಷ ಟಿ.ಜಿ.ಸಂದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಇತರರು ಇದ್ದರು.

ಅವಿನಾಶ್ ಬೊಟ್ಲಪ್ಪ ನಿರೂಪಿಸಿದರು. ಜೆಸಿಕಾ ಮತ್ತು ಸ್ಪರ್ಶ ಪ್ರಾರ್ಥಿಸಿದರು. ಮಣಜೂರು ಮಂಜುನಾಥ್ ಸ್ವಾಗತಿಸಿ, ವಂದಿಸಿದರು.