ಕೂಡಿಗೆ, ಫೆ. ೨೭: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರ ಗ್ರಾಮದ ರಸ್ತೆಯ ತಿರುವಿನಲ್ಲಿ ಮನೆ ಎದುರು ನಿಲ್ಲಿಸಲಾಗಿದ್ದ ಬೈಕ್‌ಗೆ ಹಾಗೂ ಅದರ ಮಾಲೀಕನಿಗೆ ಸೋಮವಾರಪೇಟೆ-ಹುದುಗೂರು ಕಡೆಯಿಂದ ಕೂಡಿಗೆ ಕಡೆಗೆ ಬರುತ್ತಿದ್ದ ಕಾರು ಅಪ್ಪಳಿಸಿದ ಘಟನೆ ನಡೆದಿದೆ. ಡಿಕ್ಕಿ ಹೊಡೆದು ನಂತರ ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಕಾರಿನ ಚಾಲಕನಿಗೆ ಎದೆಯ ಭಾಗಕ್ಕೆ ಪೆಟ್ಟಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಕೂಡಿಗೆ ಕೊಪ್ಪಲು ಗ್ರಾಮದ ಚಂದನ್ ಎಂಬಾತ ಚಾಲಿಸುತ್ತಿದ್ದ ಕಾರು (ಕೆ.ಎ. ೦೩. ಎಂ.ಜೆ. ೬೧೦೫) ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಕುಶಾಲನಗರ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ.

ಬೈಕ್ ಮಾಲೀಕ ಪ್ರಜ್ವಾಲ್ ಅವರ ಕಾಲಿನ ಭಾಗಕ್ಕೆ ಸಣ್ಣಪುಟ್ಟ ಗಾಯ ವಾಗಿದ್ದ ಅವರಿಗೆ ಕುಶಾಲನಗರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.