ಮಡಿಕೇರಿ, ಫೆ. ೨೬: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ಸೋಮವಾರಪೇಟೆಯ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ತಾ. ೨೮ ರಂದು ಜಿಲ್ಲಾಮಟ್ಟದ ಉದ್ಯೋಗ ಮೇಳ ನಡೆಯಲಿದ್ದು, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಿಯುಸಿ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಮತ್ತು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. (೧೮ ರಿಂದ ೩೫ ವರ್ಷದೊಳಗಿನ ಪುರುಷ ಮತ್ತು ಮಹಿಳೆಯರು). ತಾ. ೨೮ ರಂದು ಬೆಳಿಗ್ಗೆ ೯.೩೦ ಗಂಟೆಗೆ ಹಾಜರಾಗಿ ನೋಂದಣಿ ಮಾಡಬೇಕು. ಆಧಾರ್ ಕಾರ್ಡ್, ೨೦ ಪ್ರತಿಗಳ ಸ್ವವಿವರದೊಂದಿಗೆ ಹಾಜರಾಗಬೇಕು. ಅಭ್ಯರ್ಥಿಗಳ ಅಂಕಪಟ್ಟಿ ಮತ್ತು ಮೂಲ ದಾಖಲೆಗಳ ಪ್ರತಿಯನ್ನು ಹಾಜರುಪಡಿಸಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ತಿಳಿಸಿದರು.

ಉದ್ಯೋಗ ಮೇಳದಲ್ಲಿ ರಾಣಿ ಮದ್ರಾಸ್, ಜಸ್ಟ್ ಡಯಲ್, ಕ್ಲಬ್ ಮಹೀಂದ್ರ, ವಕ್ಫ್ ಫೌಂಡೇಷನ್, ಕಾಗೆಂಟ್ ಇ-ಸರ್ವೀಸ್, ಇಬ್ಬನಿ ರೆಸಾರ್ಟ್, ಸೇರಿದಂತೆ ೨೨ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳಲಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತೆ ಉಮಾ ಅವರು ಹೇಳಿದರು.