ಮಡಿಕೇರಿ, ಫೆ. ೨೫: ದೇಶಪ್ರೇಮ ಎಂಬುದು ಪ್ರತಿಯೋರ್ವ ಭಾರತೀಯನ ಮನಸ್ಸಿನಲ್ಲಿಯೂ ಹಾಸುಹೊಕ್ಕಾಗಬೇಕು. ಭಾರತ ದೇಶದ ಹಿರಿಮೆಯನ್ನು ಪ್ರತಿಯೋರ್ವರೂ ಗೌರವಿಸುವಂತಾಗಬೇಕು ಎಂದು ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದ್ದಾರೆ.

ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಆಯೋಜಿತ ದೇಶಪ್ರೇಮ ಕುರಿತ ರೋಟರಿ ಜಿಲ್ಲಾ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಪ್ರಕಾಶ್ ಕಾರಂತ್. ಯುವಪೀಳಿಗೆಯಲ್ಲಿ ದೇಶಪ್ರೇಮ ಮೂಡಿಸುವಂತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜಿತವಾಗಬೇಕು. ಭಾರತದ ಅಪ್ರತಿಮ ಸೇನಾಧಿಕಾರಿಗಳನ್ನು ಯುವಪೀಳಿಗೆಗೆ ಪರಿಚಯಿಸುವ ಯೋಜನೆಗಳು ನಡೆಯಬೇಕು ಎಂದರಲ್ಲದೇ, ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆ ೩೧೮೧ ಮಂಗಳೂರಿನಿAದ ಮೈಸೂರಿನವರೆಗೆ ದೇಶಪ್ರೇಮ ಬಿಂಬಿಸುವ ಸಂದೇಶ ಸಾರುವ ವಾಹನ ಜಾಥಾ ಆಯೋಜಿಸಿದ್ದು ೩೦ ರೋಟರಿ ಸದಸ್ಯರು ಪಾಲ್ಗೊಂಡಿದ್ದಾರೆ ಎಂದರು. ಭಾರತದ ಅಪ್ರತಿಮ ಸೇನಾ ನಾಯಕ ಜನರಲ್ ತಿಮ್ಮಯ್ಯ ನೆನಪುಗಳನ್ನು ಹೊಂದಿರುವ ಭವನವಾದ ತಿಮ್ಮಯ್ಯ ಮ್ಯೂಸಿಯಂಗೆ ರೋಟರಿ ಸದಸ್ಯರ ಭೇಟಿ ಸಾರ್ಥಕತೆ ಮೂಡಿಸಿದೆ. ಪ್ರತಿಯೋರ್ವ ದೇಶಪ್ರೇಮಿಯೂ ಈ ಸ್ಮಾರಕ ಭವನಕ್ಕೆ ಭೇಟಿ ನೀಡಿದಾಗ ಖಂಡಿತಾ ದೇಶಪ್ರೇಮ ವೃದ್ಧಿಸುತ್ತದೆ ಎಂದು ಪ್ರಕಾಶ್ ಕಾರಂತ್ ಹೇಳಿದರು.

ಮಡಿಕೇರಿ ರೋಟರಿ ಸಂಸ್ಥೆ, ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್, ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಿವೃತ್ತ ಮೇಜರ್ ವೆಂಕಟಗಿರಿ ಮತ್ತು ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಾಜಪೇಟೆಯ ಮೇಜರ್ ಎಸ್.ವೆಂಕಟಗಿರಿ, ಓರ್ವ ಸೈನಿಕ ಪ್ರಾಣ ಕೊಡಲೆಂದೇ ಸೈನ್ಯಕ್ಕೆ ಸೇರುವುದಿಲ್ಲ. ಆದರೆ ಸೇನೆ ಸೇರಿದ ನಂತರ ತನ್ನ ದೇಶಕ್ಕಾಗಿ ನಿಜವಾದ ಸೈನಿಕ ಪ್ರಾಣ ನೀಡಲೂ ಹಿಂಜರಿಯುವುದಿಲ್ಲ. ಇದೇ ನಿಜವಾದ ದೇಶಭಕ್ತಿ ಎಂದರು. ಯೋಗೇಂದ್ರ ಸಿಂಗ್ ಯಾದವ್ ಎಂಬ ೧೮ ವರ್ಷದ ಯುವಕ ತನಗೆ ೧೮ ಗುಂಡಿನೇಟುಗಳು ಕಾಲಿಗೆ ಬಿದ್ದಾಗಲೂ ದೇಶಕ್ಕಾಗಿ ಹೋರಾಡಿದ. ಚೀನಾ ಗಡಿಯ ತವಾಂಗ್‌ನಲ್ಲಿ ಭಾರತೀಯ ಸೈನಿಕರು ಕ್ಷಣಕ್ಷಣವೂ ಪ್ರಾಣ ರಕ್ಷಣೆ ಮಾಡುತ್ತಲೇ ದೇಶ ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಇಂತಹ ವೀರ ಸೈನಿಕರು ನಮಗೆ ಆದರ್ಶವಾಗಬೇಕೆಂದು ಹೇಳಿದರು.

ನಿವೃತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮಾತನಾಡಿ, ಭಾರತೀಯರು ಸುರಕ್ಷಿತ ಜೀವನ ನಡೆಸುವಲ್ಲಿ ನಮ್ಮ ಹೆಮ್ಮೆಯ ವೀರಸೈನಿಕರ ಕೊಡುಗೆ ಇದೆ. ಪ್ರಸ್ತುತ ಭಾರತಕ್ಕೆ ದೇಶದ ಹೊರಗಿನ ಶತ್ರುಗಳಿಗಿಂತ ದೇಶದ ಒಳಗಿನ ಗುಪ್ತ ಶತ್ರುಗಳ ವಿರುದ್ಧ ಹೋರಾಡುವುದೇ ಸವಾಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ರತನ್ ತಿಮ್ಮಯ್ಯ ಸ್ವಾಗತಿಸಿ, ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿ ವಂದಿಸಿದರು. ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಕಾರ್ಯಪ್ಪ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್ ನಿರ್ವಹಿಸಿದರು.

ಈ ಸಂದರ್ಭ ರೋಟರಿ ಜಿಲ್ಲೆಯ ಕಾರ್ಯದರ್ಶಿ ನಾರಾಯಣ ಹೆಗಡೆ, ನಿಯೋಜಿತ ಗವರ್ನರ್ ವಿಕ್ರಂ ದತ್ತ, ಮಾಜಿ ಗವರ್ನರ್‌ಗಳಾದ ಡಾ.ರವಿ ಅಪ್ಪಾಜಿ, ಮಾತಂಡ ಸುರೇಶ್ ಚಂಗಪ್ಪ, ರೋಟರಿ ಜಿಲ್ಲಾ ಪ್ರಮುಖರಾದ ಸತೀಶ್ ಬೊಳಾರ್, ಜಾಥಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಆಯೋಜಕ ಸಂಸ್ಶೆಯಾದ ಬೈಕಂಪಾಡಿ ರೋಟರಿ ಸಂಸ್ಥೆಯ ಅಧ್ಯಕ್ಷ ಅಶೋಕ್, ಬಿ.ಜಿ. ಅನಂತಶಯನ, ಮೋಹನ್ ಪ್ರಭು, ಡಿ.ಎಂ.ತಿಲಕ್, ಬಿ.ಕೆ. ರವೀಂದ್ರರೈ, ಕೆ.ಕೆ.ವಿಶ್ವನಾಥ್, ಸೋಮಣ್ಣ, ಪಿ.ವಿ. ಅಶೋಕ್, ಗೀತಾಗಿರೀಶ್, ಇನ್ನರ್ ವೀಲ್ ಕಾರ್ಯದರ್ಶಿ ಲಲಿತಾ ರಾಘವನ್, ನಿರ್ದೇಶಕಿಯರಾದ ಮಲ್ಲಿಗೆಪೈ, ಪಾರ್ವತಿ ಚೀಯಣ್ಣ ಸೇರಿದಂತೆ ರೋಟರಿ ಸದಸ್ಯರು ಹಾಜರಿದ್ದರು.