ಚೆಟ್ಟಳ್ಳಿ, ಫೆ. ೨೬: ಚೆಟ್ಟಳ್ಳಿ ಚೇರಳ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವವು ತಾ. ೨೮ ರಿಂದ ಮಾರ್ಚ್ ೫ರವರೆಗೆ ನೆರವೇರಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
ತಾ. ೨೮ ರಂದು ಪೂರ್ವಾಹ್ನ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಊರಿನವರೆಲ್ಲ ಸೇರಿ ದೇವಾಲಯದಲ್ಲಿ ಬೊಳಕ್‌ಮರ ನಿಲ್ಲಿಸಿದ ಬಳಿಕ ಹಬ್ಬಕಟ್ಟು ಬೀಳಲಿದೆ. ನಂತರದ ದಿನ ಬೆಳಿಗ್ಗೆ ದೇವಾಲಯದಲ್ಲಿ ಕೊಂಬಾಟ್ ನೆರವೇರಲಿದೆ. ಮಾರ್ಚ್ ೩ ರಂದು ಪಟ್ಟಣಿ ಹಬ್ಬವಾಗಿದ್ದು ದೇವರ ಬನಕ್ಕೆ ಹೋಗಿ ಹೆಣ್ಣುಮಕ್ಕಳು ಪಾಯಸ ಮಾಡಿ ಅಯ್ಯಪ್ಪ ದೇವರ ಬನದಲ್ಲಿ ನೈವೇದ್ಯ ಇಟ್ಟು ಬರುವುದು. ಮಧ್ಯಾಹ್ನ ೩ ಗಂಟೆಗೆ ಕೊಂಗೇಟಿರ ಐನ್ ಮನೆಯಿಂದ ತಕ್ಕರು, ಊರಿನವರು ದೇವತಕ್ಕರ ಮನೆಗೆ ಬಂದು ಫಲಹಾರ ಸ್ವೀಕರಿಸಿ ದೇವರ ಭಂಡಾರವನ್ನು ದೇವತಕ್ಕರ ಮನೆಯಿಂದ ದೇವಾಲಯಕ್ಕೆ ತರುವುದು.
ಮಾರ್ಚ್ ೪ ರಂದು ಅಯ್ಯಪ್ಪ ಬನದಲ್ಲಿ ಪೂಜಾ ಕಾರ್ಯಕ್ರಮ ನಡೆದು, ಊರಿನವರು ತಕ್ಕಮುಖ್ಯಸ್ತರ ಸಮ್ಮುಖದಲ್ಲಿ ದೇವಾಲಯಕ್ಕೆ ಬಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ದೇವರಕಟ್ಟನ್ನು ಮುರಿದು ಕೊಂಬಾಟ್ ನೆರವೇರಲಿದೆ.
ಮಾರ್ಚ್ ೫ ರಂದು ದೊಡ್ಡಹಬ್ಬ ನಡೆಯಲಿದ್ದು, ಅಪರಾಹ್ನ ೩ ಗಂಟೆಗೆ ಊರಿನವರು ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು. ಭಗವತಿ ದೇವಿಗೆ ವಿಶೇಷ ಅಲಂಕಾರದೊAದಿಗೆ ಪೂಜೆ ನೆರವೇರಿಸಿ ದೇವರ ಸನ್ನಿಧಿಯಲ್ಲಿಟ್ಟಂತಹ ಕೊಂಬನ್ನು ಹಿಡಿದು ೧೮ ತರಹದ ಕೊಂಬಾಟ್ ನೃತ್ಯ, ಪ್ರಸಾದ ವಿತರಣೆ, ಊಟೋಪಚಾರದ ನಂತರ ದೇವರ ಭಂಡಾರವನ್ನು ತಕ್ಕರ ಮನೆಗೆ ಒಪ್ಪಿಸಲಾಗುವುದು ಎಂದು ದೇವತಕ್ಕರಾದ ಚೇರಳತಮ್ಮಂಡ ಆನಂದ ಹಾಗೂ ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ತಿಳಿಸಿದ್ದಾರೆ.