ಮಡಿಕೇರಿ, ಫೆ. ೨೫: ಹೆಜ್ಜೇನು ದಾಳಿಯಿಂದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಮರಗೋಡು ಸಮೀಪದ ಹುಲಿತಾಳದಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮರಗೋಡು ಸನಿಹ ಹುಲಿತಾಳದ ಭಾಗೀರಥಿ ಮತ್ತು ಮಂಜುನಾಥ್ ದಂಪತಿಯ ಪುತ್ರ ಅಶ್ವಿನ್ ಕುಮಾರ್ (೪೫) ಮೃತ ದುರ್ಧೈವಿ. ಅವಿವಾಹಿತರಾಗಿದ್ದ ಇವರು ಕೃಷಿಯಲ್ಲಿ ಎಂ.ಎಸ್ಸಿ ಪದವಿ ಗಳಿಸಿದ್ದರು. ಇಂದು ಬೆಳಗ್ಗಿನ ವೇಳೆ ತನ್ನ ತಂಗಿ ಅಪರ್ಣ ಅವರೊಂದಿಗೆ ಮನೆ ಸನಿಹದ ತಮ್ಮ ತರಕಾರಿ ತೋಟಕ್ಕೆ ತೆರಳಿ ಕೆಲಸ ನಿರ್ವಹಿಸುತ್ತಿದ್ದರು. ಬೆಳೆದ ಮೂಲಂಗಿಯನ್ನು ಕುಯ್ಯುತ್ತಿರುವ ಸಂದರ್ಭ ದಿಢೀರ್ ಆಗಿ ಇವರಿಬ್ಬರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ.

ತಕ್ಷಣ ಇಬ್ಬರು ಕೂಡ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಗೆ ಓಡಿ ಬಂದಿದ್ದಾರೆ. ಅಪರ್ಣ ಅವರಿಗೂ

ಹೆಜ್ಜೇನು ದಾಳಿಯಿಂದ ಗಾಯಗಳಾಗಿ ಅವರು ಚೇತರಿಸಿಕೊಂಡಿದ್ದಾರೆ. ಆದರೆ, ತೀವ್ರ ಅಸ್ವಸ್ಥಗೊಂಡ ಅಶ್ವಿನ್ ಕುಮಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಸಾವಿಗೀಡಾಗಿರುವುದಾಗಿ ವೈದ್ಯರು ದೃಢಪಡಿಸಿದರು.

(ಮೊದಲ ಪುಟದಿಂದ) ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಗರಕೇರಿಯಲ್ಲಿ ಕಾರ್ಮಿಕ ಬಲಿ

ಹೆಜ್ಜೇನು ದಾಳಿಗೆ ಸಿಲುಕಿ ಕಾರ್ಮಿಕ ವ್ಯಕ್ತಿಯೋರ್ವರು ದುರ್ಮರಣಗೊಂಡಿರುವ ಘಟನೆ ಬಾಡಗರಕೇರಿ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಕಾರ್ಮಿಕರಾಗಿದ್ದ ವೇಲು ಹಾಗೂ ಅವರ ಪತ್ನಿ ಇಂದು ಕೆಲಸಕ್ಕೆಂದು ತೆರಳಿದ್ದ ಸಂದರ್ಭ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಇದರಿಂದ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ವೇಲು ಅವರನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಪತ್ನಿ ಲಕ್ಷಿö್ಮ ಅವರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.