ಪೊನ್ನಂಪೇಟೆ, ಫೆ. ೨೫: ದಕ್ಷಿಣ ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಪ್ರತ್ಯೇಕ ಸ್ಥಳಗಳಲ್ಲಿ ಎರಡು ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿವೆ. ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದ ಕಳ್ಳೇಂಗಡ ಕುಶಾಲಪ್ಪ ಎಂಬವರಿಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿದೆ. ಕುಶಾಲಪ್ಪ ಅವರ ಮನೆಯ ಪಕ್ಕದ ಗದ್ದೆಯಲ್ಲಿ ಶುಕ್ರವಾರ ರಾತ್ರಿ ವೇಳೆ ಹಸುವನ್ನು ಕೊಂದು ಹಾಕಿರುವ ಹುಲಿ ಅರ್ಧ ಭಾಗ ತಿಂದುಹಾಕಿದ್ದು, ಉಳಿದ ಭಾಗವನ್ನು ಅಲ್ಲೇ ಬಿಟ್ಟು ಹೋಗಿದೆ. ಈ ಸಂದರ್ಭ ಮಾತನಾಡಿದ ಜಾನುವಾರು ಮಾಲೀಕ ಕಳ್ಳೇಂಗಡ ಕುಶಾಲಪ್ಪ ಅವರು, ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಂ.ಶರಣ ಬಸಪ್ಪ, ಪೊನ್ನಂಪೇಟೆ ವಲಯ ಅರಣ್ಯಧಿಕಾರಿ ಬಿ.ಎಂ ಶಂಕರ್, ಗಣೇಶ್ ಶೇಟ್, ಡಿ.ಆರ್.ಎಫ್.ಓ, ರಕ್ಷಿತ್ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅರಣ್ಯ ರಕ್ಷಕರಾದ ಚೇತನ್ ಕುಮಾರ್, ಸಂಜಯ್ ಚೌಹಾಣ್, ಆರ್ಆರ್ಟಿ ಸಿಬ್ಬಂದಿ ಭರತ, ನಿತಿನ್, ಅರುಣಾ ಕೌಶಿಕ್. ಗ್ರಾಮಸ್ಥರಾದ ಕಳ್ಳೇಂಗಡ ರೋಹಿತ್, ಕಳ್ಳೇಂಗಡ ಸುರೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಕುಂದ ಈಚೂರು ಗ್ರಾಮದಲ್ಲಿ
ಮತ್ತೊಂದು ಘಟನೆ ಕುಂದ ಈಚೂರು ಗ್ರಾಮದಲ್ಲಿ ನಡೆದಿದ್ದು, ಹುಲಿ ದಾಳಿಗೆ ಗುಮ್ಮಟ್ಟೀರ ದರ್ಶನ್ ನಂಜಪ್ಪ ಎಂಬವರ ಹಸು ಬಲಿಯಾಗಿದೆ. ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸು ಕಾಣೆಯಾದ ಹಿನ್ನೆಲೆಯಲ್ಲಿ ಹಸುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಗದ್ದೆ ಪಕ್ಕದ ತೋಟದಲ್ಲಿ ಹುಲಿಯು ತಿಂದು ಬಿಟ್ಟಿದ್ದ ಹಸುವಿನ ಕಳೇಬರ ಪತ್ತೆಯಾಗಿದೆ. ಈ ಸಂದರ್ಭ ಹಸು ಮಾಲೀಕರಾದ ಗುಮ್ಮಟ್ಟೀರ ದರ್ಶನ್ ನಂಜಪ್ಪ ಮಾತನಾಡಿ, ತೋಟದಲ್ಲಿ ಕಾರ್ಮಿಕರು ಜೀವಭಯದಿಂದ ಕೆಲಸ ನಿರ್ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದು, ಮಾನವ ಜೀವ ಹಾನಿಯಾಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹುಲಿಯನ್ನು ಸೆರೆಹಿಡಿಯಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.
ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಂ. ಶರಣ ಬಸಪ್ಪ ಮಾತನಾಡಿ, ಹೈಸೊಡ್ಲೂರು ಮತ್ತು ಕುಂದ ಈಚೂರು ವಿಭಾಗದಲ್ಲಿ ಹುಲಿದಾಳಿಗೆ ಎರಡು ಜಾನುವಾರುಗಳು ಬಲಿಯಾಗಿದ್ದು, ಎರಡೂ ಸ್ಥಳಗಳಲ್ಲಿ ಹುಲಿಯ ಚಲನವಲನ ತಿಳಿಯಲು ಕ್ಯಾಮರ ಅಳವಡಿಸಲಾಗಿದೆ. ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ ಶಂಕರ್, ದಿವಾಕರ್, ಡಿಆರ್ಎಫ್ಓ ಶಶಿ ಕುಮಾರ್, ಸಿಬ್ಬಂದಿ ಸುಮಾ, ಎಂ.ಮಾದ ಹಾಗೂ ಗ್ರಾಮಸ್ಥರು ಇದ್ದರು. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆ ಕಾಡಿನಿಂದ ನಾಡಿಗೆ ಬಂದಿರುವ ಹುಲಿಗಳನ್ನು ಸೆರೆ ಹಿಡಿದು ಆತಂಕ ನಿವಾರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
-ಚನ್ನನಾಯಕ