ಸಿದ್ದಾಪುರ, ಫೆ ೨೫ : ಕಾಡ್ಗಿಚ್ಚಿನಿಂದಾಗಿ ಸ್ಮಶಾನದಲ್ಲಿದ್ದ ಕಾಡು ಗಿಡಗಳು, ಬಿದಿರುಗಳು ಬೆಂಕಿಗೆ ಆಹುತಿಯಾದ ಘಟನೆ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡುವಿನಲ್ಲಿ ನಡೆದಿದೆ.

ನೆಲ್ಯಹುದಿಕೇರಿಯ ಬೆಟ್ಟದಕಾಡು ರಸ್ತೆಯಲ್ಲಿರುವ ಸ್ಮಶಾನ ಜಾಗದಲ್ಲಿ ಶನಿವಾರದಂದು ಬೆಂಕಿ ಕಾಣಿಸಿಕೊಂಡು ಗಿಡ-ಗಂಟಿಗಳು, ಬಿದಿರುಗಳಿಗೆ ಬೆಂಕಿ ಹೊತ್ತಿ ಉರಿದು ದಟ್ಟವಾದ ಹೊಗೆ ಹೊರ ಬಂದಿತ್ತು. ಗಾಳಿಗೆ ಬೆಂಕಿಯ ರಭಸ ಹೆಚ್ಚಾಗಿತ್ತು. ಸ್ಮಶಾನ ಸಮೀಪದಲ್ಲಿ ಹಲವಾರು ಮನೆಗಳಿದ್ದು, ನಿವಾಸಿಗಳು ಭಯಗೊಂಡು ಕೂಡಲೇ ಕಾವೇರಿ ನದಿಯಿಂದ ಹಾಗೂ ಸಮೀಪದ ಮನೆಗಳಿಂದ ಬಿಂದಿಗೆ ಇನ್ನಿತರ ಪಾತ್ರೆಗಳಲ್ಲಿ ನೀರು ತಂದು ಸುರಿದರು. ಬೆಂಕಿ ನಂದಿಸಲು ಪ್ರಯತ್ನಪಟ್ಟರು. ಬೆಂಕಿಜ್ವಾಲೆ ಬಿಸಿಲಿನ ತಾಪಕ್ಕೆ ಹೆಚ್ಚಾಗುತ್ತಿದ್ದಂತೆ ಕುಶಾಲನಗರದಿಂದ ಅಗ್ನಿ ಶಾಮಕ ದಳದ ವಾಹನಗಳನ್ನು ಕರೆಸಿ ಬೆಂಕಿ ನಂದಿಸಿದರು.

ಸಾರ್ವಜನಿಕರು ಬೆಂಕಿ ಕಂಡ ಕೂಡಲೇ ಬೆಂಕಿ ನಂದಿಸಲು ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಕಳೆದವರ್ಷ ಕೂಡ ಬೇಸಿಗೆಯಲ್ಲಿ ಬೆಟ್ಟದಕಾಡುವಿನ ಹಿಂದೂ ರುದ್ರಭೂಮಿಯಲ್ಲಿ ಬಿದಿರುಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿದ್ದವು.