ಸೋಮವಾರಪೇಟೆ, ಫೆ.೨೪: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಕೊತ್ನಳ್ಳಿ, ಕುಮಾರಳ್ಳಿ ಗ್ರಾಮಗಳಲ್ಲಿ ಉದ್ಭವಿಸಿರುವ ಅರಣ್ಯ ಪ್ರದೇಶದ ಜಾಗದ ವಿವಾದಕ್ಕೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಮುಂದಾಗಿದ್ದು, ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಭೆಯನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.

ಜಿಲ್ಲಾ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕುಮಾರಳ್ಳಿ, ಕೊತ್ನಳ್ಳಿ ವ್ಯಾಪ್ತಿಯಲ್ಲಿ ಉಂಟಾಗಿರುವ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವಿನ ಜಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.

ಕುಮಾರಳ್ಳಿ-ಕೊತ್ನಳ್ಳಿ ಸೇರಿದಂತೆ ಇತರ ಗ್ರಾಮಗಳು ಪುಷ್ಪಗಿರಿ ಬೆಟ್ಟಶ್ರೇಣಿಗೆ ಒತ್ತಿಕೊಂಡAತೆ ಇದ್ದು, ಇತ್ತೀಚಿಗಷ್ಟೇ ಜನವಸತಿ ಮತ್ತು ಕೃಷಿ ಪ್ರದೇಶದ ಸಮೀಪ ಅರಣ್ಯ ಇಲಾಖೆ ಗಡಿ ಗುರುತು ಮಾಡಿದೆ. ಇದರಿಂದಾಗಿ ಗ್ರಾಮಸ್ಥರ ಸಹಜ ಜೀವನಕ್ಕೆ ತೊಂದರೆಯಾಗುತ್ತಿದೆ. ಈ ಹಿಂದೆ ಇದ್ದ ಅರಣ್ಯ ಇಲಾಖೆಯ ಗಡಿಯನ್ನೇ ಮುಂದುವರೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಲೇ ಬರುತ್ತಿದ್ದು, ಇಂದು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆ ನಡೆಯಿತು.

ಕುಮಾರಳ್ಳಿ ಗ್ರಾಮದ ಸ.ನಂ. ೧/೯ಪಿ೯೯ ಮತ್ತು ೧/೯ಪಿ೨ಕ್ಕೆ ಸಂಬAಧಿಸಿದAತೆ ಈಗಾಗಲೇ ಅರಣ್ಯ ಇಲಾಖೆಯ ರಕ್ಷಿತಾರಣ್ಯ ವಿಭಾಗ ಮತ್ತು ಕಂದಾಯ ಇಲಾಖೆಯು ಜಂಟಿ ಸರ್ವೆ ಮಾಡಿದ್ದು, ಇದುವರೆಗೂ ಅಳತೆ ನಕಾಶೆಯ ಬಗ್ಗೆ ವರದಿ ನೀಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖಾಧಿಕಾರಿಗಳು, ಕುಮಾರಳ್ಳಿ ಗ್ರಾಮದ ಸ.ನಂ. ೧/೯ಪಿ೯೯ರಲ್ಲಿ ೧೧೪೯೪.೨೦ ಎಕರೆಯ ಪೈಕಿ ೮೭೫೬.೨೯ ಎಕರೆ ಮಾತ್ರ ರಕ್ಷಿತಾರಣ್ಯಕ್ಕೆ ಒಳಪಟ್ಟಿದೆ. ಈ ಬಗ್ಗೆ ನಕಾಶೆ ಲಭ್ಯವಿದ್ದು, ನೀಡುವುದಾಗಿ ತಿಳಿಸಿದರು.

ಉಳಿದ ವಿಸ್ತೀರ್ಣದಲ್ಲಿ ಸಾಮಾಜಿಕ ಅರಣ್ಯ ಎಷ್ಟಿದೆ ಎಂಬುದನ್ನು ಲಿಖಿತ ರೂಪದಲ್ಲಿ ತಿಳಿಸಬೇಕು. ಇದರೊಂದಿಗೆ ಸರ್ಕಾದ ಸುತ್ತೋಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಉಪ ವಿಭಾಗಾಧಿಕಾರಿ ಸೂಚಿಸಿದರು.

ಕುಮಾರಳ್ಳಿ ಗ್ರಾಮದ ಸ.ನಂ. ೧/೯ಪಿ೯೯ಕ್ಕೆ ಸಂಬAಧಿಸಿದAತೆ ೨೦೦೬ರ ನೋಟಿಫಿಕೇಷನ್ ಪರಿಶೀಲಿಸಿ ಮುಂದಿನ ಕ್ರಮವಹಿಸಬೇಕು. ಇದರೊಂದಿಗೆ ಸಿ ಮತ್ತು ಡಿ ವರ್ಗದ ಜಮೀನುಗಳ ವಿಸ್ತೀರ್ಣದ ಬಗ್ಗೆ ೨೦೦೬ರ ಆರ್ಡರ್ ನೋಟಿಫಿಕೇಷನ್ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕಂದಾಯ ಇಲಾಖೆಯು ಹೊರಡಿಸಿರುವ ೨೫ ಎಕರೆ ಕೃಷಿ ಜಾಗವನ್ನು ೩೦ ವರ್ಷಗಳ ವರೆಗೆ ಗೇಣಿಗೆ ನೀಡುವ ಆದೇಶವನ್ನು ಅನುಷ್ಠಾನಕ್ಕೆ ತರಬೇಕು ಎಂದರು.

ಸಾರ್ವಜನಿಕ ಉದ್ದೇಶಗಳಿಗೆ ಅರಣ್ಯ ಇಲಾಖೆಯ ಜಾಗವನ್ನು ಬಳಸಿಕೊಂಡರೆ ಅದಕ್ಕೆ ದುಪ್ಪಟ್ಟು ಜಾಗವನ್ನು ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಿದೆ. ಈ ಬಗ್ಗೆ ವಿಸ್ತೃತ ವರದಿ ತಯಾರಾಗಬೇಕಿದೆ ಎಂದು ಅಧಿಕಾರಿ ತಿಳಿಸಿದರು.

ಕುಮಾರಳ್ಳಿ ಗ್ರಾಮಕ್ಕೆ ಸಂಬAಧಿಸಿದAತೆ ನಮೂನೆ ೫೭ರಡಿ ೨೪೩ ಅರ್ಜಿಗಳು, ೫೦-೫೩ರಡಿ ೨೭೨ ಅರ್ಜಿಗಳು, ೯೪ಸಿ ಅಡಿಯಲ್ಲಿ ೧೪೨ ಅರ್ಜಿಗಳು ಸಲ್ಲಿಕೆಯಾಗಿವೆ. ಜಾಗ ಮಂಜೂರಾತಿಗೆ ಹಲವಷ್ಟು ಅಡೆತಡೆಗಳಿವೆ. ಇವುಗಳನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

ಕುಮಾರಳ್ಳಿ ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣ ೧೫,೩೦೦ ಎಕರೆಯಿದ್ದು, ಪೂರ್ವಜರ ಕಾಲದಿಂಲೂ ಕೃಷಿಯನ್ನೇ ನಂಬಿಕೊAಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಸಿ ಮತ್ತು ಡಿ ಜಾಗ ಹಾಗೂ ಸೆಕ್ಷನ್-೪ರಿಂದಾಗಿ ಜನರ ಜೀವನಕ್ಕೆ ಸಂಚಕಾರ ಎದುರಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸಿಕೊಡಬೇಕೆಂದು ಪ್ರಮುಖರಾದ ಅರುಣ್‌ಕುಮಾರ್ ಮನವಿ ಮಾಡಿದರು.

ಕುಮಾರಳ್ಳಿ ಗ್ರಾಮದ ಪೈಸಾರಿ ಸ.ನಂ. ೧/೯ಪಿ೯೯ರಲ್ಲಿ ೧೧೪೯೪ ಎಕ್ರೆಯನ್ನು ಪುಷ್ಪಗಿರಿ ವನ್ಯಜೀವಿ ವಲಯಕ್ಕೆ ಸೇರಿಸಿ ದಾಖಲೆ ಮಾಡಿರುವ ಎಂ.ಆರ್.೯/೨೦೧೯-೨೦ರಲ್ಲಿನ ನಡಾವಳಿ ಕಡತವನ್ನು ಪುನರ್ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಉಪವಿಭಾಗಾಧಿಕಾರಿಗಳು ಭರವಸೆ ನೀಡಿದರು.

ಜಾಗದ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಪುಷ್ಪಗಿರಿ ವನ್ಯಜೀವಿ ಧಾಮ ಮತ್ತು ಸಾಮಾಜಿಕ ಅರಣ್ಯದ ಡಿಎಫ್‌ಓಗಳೊಂದಿಗೆ ಮಾತನಾಡಿ, ಮೂಲ ಕಡತಗಳನ್ನು ಪುನರ್‌ಪರಿಶೀಲಿಸಿ, ತಿದ್ದುಪಡಿಗೆ ಸಂಬAಧಿಸಿದAತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಗ್ರಾಮಸ್ಥರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಯತೀಶ್ ಉಳ್ಳಾಲ್ ತಿಳಿಸಿದರು. ವೇದಿಕೆಯಲ್ಲಿ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಉಪಸ್ಥಿತರಿದ್ದರು.

ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಚೇತನ್, ವಿಮಲ್‌ಬಾಬು, ಕಂದಾಯ ಇಲಾಖೆಯ ದಾಮೋಧರ್, ಕೊತ್ನಳ್ಳಿ, ಕುಮಾರಳ್ಳಿ, ಕುಡಿಗಾಣ ಗ್ರಾಮಗಳ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.