ಗೋಣಿಕೊಪ್ಪಲು, ಫೆ. ೨೪: ದಕ್ಷಿಣ ಕೊಡಗಿನ ಕಿರುಗೂರು ಹಾಗೂ ನಲ್ಲೂರು ಭಾಗದಲ್ಲಿ ಹುಲಿ ಕಾರ್ಯಾಚರಣೆ ಮುಂದುವರೆದಿದ್ದು ಅರಣ್ಯ ಸಿಬ್ಬಂದಿಗಳು ಸ್ಥಳೀಯ ರೈತರ ಕಾಫಿ ತೋಟಗಳಲ್ಲಿ ಹಾಗೂ ಹೊಳೆ ಬದಿಯಲ್ಲಿ ಕೂಂಬಿAಗ್ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನೂರಾರು ಸಿಬ್ಬಂದಿಗಳು ಕಿರುಗೂರು ಹಾಗೂ ನಲ್ಲೂರು ಭಾಗದಲ್ಲಿ ಹಲವು ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಆದರೆ ಹುಲಿಯ ಸುಳಿವು ಮಾತ್ರ ಇನ್ನೂ ಕೂಡ ಸಿಬ್ಬಂದಿಗಳಿಗೆ ಲಭ್ಯವಾಗಿಲ್ಲ.

ಜನವಸತಿ ಪ್ರದೇಶದಲ್ಲಿ ನಾಗರಿಕರಿಗೆ ಹುಲಿಯೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆಯು ಮುಂಜಾಗೃತಾ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅನುಮಾನವಿರುವ ಸ್ಥಳಗಳಲ್ಲಿ ಆಗಿಂದ್ದಾಗಿಯೇ ಪಟಾಕಿ ಸಿಡಿಸಿ ಹುಲಿಯನ್ನು ಜನವಸತಿ ಪ್ರದೇಶದಿಂದ ಕಾಡಿನತ್ತ ಓಡಿಸುವ ಪ್ರಯತ್ನ ಮಾಡಿದ್ದಾರೆ.

೨ನೇ ದಿನವೂ ಹುಲಿ ಕಾರ್ಯಾಚರಣೆ ಆರಂಭಗೊAಡಿದ್ದು ಮುಂಜಾನೆ ವೇಳೆ ೪ ತಂಡಗಳು ಹುಲಿ ಸಂಚಾರವಿರುವ ಪ್ರದೇಶದಲ್ಲಿ ಕೂಂಬಿAಗ್ ಕಾರ್ಯಾಚರಣೆ ಕೈಗೊಂಡಿದ್ದರು. ಸಂಜೆಯ ವೇಳೆಯವರೆಗೂ ಕೂಂಬಿAಗ್ ಕಾರ್ಯಾಚರಣೆ ಮುಂದುವರೆದಿತ್ತು. ಕಾರ್ಯಾಚರಣೆ ತಂಡಕ್ಕೆ ಹುಲಿಯ ಹೆಜ್ಜೆ ಗುರುತುಗಳು ಎಲ್ಲಿಯೂ ಕಂಡು ಬರಲಿಲ್ಲ. ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಶಂಕರ್, ದಿವಾಕರ್ ಹಾಗೂ ಇನ್ನಿತರ ಅಧಿಕಾರಿಗಳ ಮುಂದಾಳತ್ವದಲ್ಲಿ ಹೆಚ್ಚಿನ ಅರಣ್ಯ ಸಿಬ್ಬಂದಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.