ಸೋಮವಾರಪೇಟೆ, ಫೆ. ೨೩: ತಾಲೂಕಿನ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ಜಾತ್ರೋತ್ಸವದ ಅಂಗವಾಗಿ ಸ್ಥಳೀಯ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆದ ಫುಟ್ಬಾಲ್ ಪಂದ್ಯಾಟದಲ್ಲಿ ಬೀಟಿಕಟ್ಟೆ ನಿಲ್ಸನ್ ಬಾಯ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಟೀಂ ಶುಂಠಿ ಪಡೆಯಿತು.
ಮೊದಲ ಸೆಮಿಫೈನಲ್ನಲ್ಲಿ ಬೀಟಿಕಟ್ಟೆ ನಿಲ್ಸನ್ ಬಾಯ್ಸ್ ತಂಡ, ಎಫ್ಸಿ ಬಾಯ್ಸ್ ಬೀಟಿಕಟ್ಟೆ ವಿರುದ್ಧ ೪-೨ ಗೋಲುಗಳಿಂದ ಜಯಗಳಿಸಿ ಅಂತಿಮ ಸುತ್ತು ಪ್ರವೇಶಿಸಿತು. ಟೀಂ ಸುಂಟಿಕೊಪ್ಪ ಮತ್ತು ಟೀಂ ಶುಂಠಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೀಂ ಶುಂಠಿ ೨-೦ ಗೋಲುಗಳಿಸಿ ಅಂತಿಮ ಸುತ್ತು ಪ್ರವೇಶಿಸಿತು.
ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಗೌಡಳ್ಳಿಯ ಶ್ರೀ ನವದುರ್ಗ ಪರಮೇಶ್ವರಿ ತಂಡ ಪ್ರಥಮ ಸ್ಥಾನ ಪಡೆಯಿತು. ನಂದಿಗುAದ ಗ್ರಾಮದ ದೇವ್ಗ್ರೂಪ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀ ನವದುರ್ಗ ಪರಮೇಶ್ವರಿ ತಂಡ ಕೂಗೂರು ಗ್ರಾಮದ ಪಿವೈಸಿ ತಂಡವನ್ನು ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿದರೆ, ಮತ್ತೊಂದು ಪಂದ್ಯದಲ್ಲಿ ದೇವ್ಗ್ರೂಪ್ ತಂಡ ಟೀಂ ಶುಂಠಿ ತಂಡವನ್ನು ಮಣಿಸಿ ಅಂತಿಮ ಸುತ್ತು ಪ್ರವೇಶಿಸಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಿ.ಜಿ. ಮಲ್ಲಿಕಾ, ದಾನಿಗಳಾದ ಪವನ್ ದೇವಯ್ಯ, ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಹೆಚ್.ಎನ್. ಚಂದ್ರಶೇಖರ್, ಕೆ.ಸಿ. ಸುಮಂತ್, ಎಸ್.ಬಿ. ಗುರುಪ್ರಸಾದ್, ಹೆಚ್.ಆರ್. ಮುತ್ತಣ್ಣ, ವೀರಭದ್ರಪ್ಪ, ಅಜ್ಜಳ್ಳಿ ನವೀನ್ ಮತ್ತಿತರರು ಇದ್ದರು.
ತೀರ್ಪುಗಾರರಾಗಿ ಕಿರಣ್, ಸುನಿಲ್, ಲೋಹಿತ್, ಪ್ರವೀಣ್ ಮತ್ತು ಶಿವಕುಮಾರ್ ಕಾರ್ಯ ನಿರ್ವಹಿಸಿದರು.