ನಾಪೋಕ್ಲು, ಫೆ. ೨೨: ಸಮೀಪದ ಮೂರ್ನಾಡಿನ ನಕ್ಷತ್ರ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ತಾ. ೨೬ ರಂದು ಮೂರ್ನಾಡು ಪಾಂಡಾಣೆ ಕ್ರೀಡಾ ಮೈದಾನದಲ್ಲಿ ಎಂಟನೇ ವರ್ಷದ ವಾರ್ಷಿಕ ಆಟೋಟ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ, ಕಾರ್ಯದರ್ಶಿ ಪ್ರಸನ್ನ, ನಾಪೋಕ್ಲು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಕಾರ್ಯದರ್ಶಿ ಲೋಕೇಶ್, ವೀರಾಜಪೇಟೆ ಜೈ ಭಾರತ ಮಾಲೀಕರ ಸಂಘದ ಅಧ್ಯಕ್ಷ ಶಿವು, ಕಾರ್ಯದರ್ಶಿ ಪ್ರದೀಪ್ ಕುಮಾರ್, ಅಮ್ಮತ್ತಿಯ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಭಿ, ಕಾರ್ಯದರ್ಶಿ ರಂಶೀದ್, ಮೂರ್ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ತಿಮ್ಮಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭ ಹಿರಿಯ ಸದಸ್ಯರಾದ ಮೂರ್ನಾಡಿನ ಪೀರ್ ಅಹಮದ್, ಕಟ್ಟೆಮಾಡಿನ ಯತಪ್ಪ, ಪಾಲೆಮಾಡಿನ ಮೇವಿನ್ ಅವರನ್ನು ಸನ್ಮಾನಿಸಲಾಗುವುದು. ೧೦ನೇ ತರಗತಿಯಲ್ಲಿ ಅಧಿಕ ಅಂಕಗಳಿಸಿದ ಎಂ.ಆರ್. ಭುವನೇಶ್ ಹಾಗೂ ಹೆಚ್.ಎಸ್. ಮೋನಿಕಾ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವೈಷ್ಣವಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.