ಸೋಮವಾರಪೇಟೆ, ಫೆ. ೨೨: ಇಲ್ಲಿನ ಒಕ್ಕಲಿಗರ ಯುವವೇದಿಕೆ, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ ೪ರ ಶನಿವಾರ ಮತ್ತು ೫ರ ಭಾನುವಾರ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ.

ಈ ಕುರಿತು ಶುಕ್ರವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ. ಸುರೇಶ್ ಮಾಹಿತಿ ನೀಡಿದರು. ಸೋಮವಾರಪೇಟೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ೪ನೇ ವರ್ಷದ ಒಕ್ಕಲಿಗರ ಕಪ್ ಪಂದ್ಯಾಟ ನಡೆಯಲಿದ್ದು ಪ್ರಥಮ ಬಹುಮಾನ ೨ ಲಕ್ಷ ರೂ.ನಗದು ಹಾಗೂ ಪಾರಿತೋಷಕ, ದ್ವಿತೀಯ ೧ ಲಕ್ಷ ನಗದು ಹಾಗೂ ಪಾರಿತೋಷಕ, ಮೂರು ಮತ್ತು ನಾಲ್ಕನೇ ಬಹುಮಾನವಾಗಿ ತಲಾ ೫೦ ಸಾವಿರ ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಇದರೊಂದಿಗೆ ಕೊಡಗು ಜಿಲ್ಲೆಯ ತಂಡಗಳಿಗೆ ಪ್ರಥಮ ಬಹುಮಾನ ರೂ ೩೦,೦೦೦, ದ್ವಿತೀಯ ೨೦,೦೦೦ ಹಾಗೂ ತೃತೀಯ ಬಹುಮಾನವಾಗಿ ೧೦.೦೦೦ ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ರೈಲ್ವೇ, ಕ್ಲಬ್ ಮಹೀಂದ್ರ ಸೇರಿದಂತೆ ಪ್ರತಿಷ್ಠಿತ ಕ್ಲಬ್‌ಗಳ ತಂಡಗಳು ಭಾಗವಹಿಸಲಿದ್ದು. ಪ್ರತಿ ತಂಡಗಳಲ್ಲೂ ೫ ರಿಂದ ೬ ಪ್ರೋ ಕಬಡ್ಡಿಯಲ್ಲಿ ಆಡಿದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮೈದಾನದಲ್ಲಿ ಸುಮಾರು ೧೦,೦೦೦ ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ಕ್ರೀಡಾಭಿಮಾನಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ೩೦ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಚೌಡ್ಲು ಯೋಗೇಂದ್ರ, ಗೌಡಳ್ಳಿ ಪೃಥ್ವಿ, ಡಿ.ಪಿ. ಪ್ರೀತಮ್, ಶ್ರೀ ಹರಿ, ದುರೀಣ್ ಉಪಸ್ಥಿತರಿದ್ದರು.