(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಫೆ. ೨೩: ಪ್ರತಿ ನಾಗರಿಕನಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ನಿರ್ಧಾರ ಕೈಗೊಂಡಿದ್ದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವ ಮೂಲಕ ಆರಂಭದಲ್ಲಿ ಕೇವಲ ೨ ರೂ. ಗಳಿಗೆ ೨೦ ಲೀಟರ್ ಶುದ್ಧ ಕುಡಿಯುವ ನೀರನ್ನು ಘಟಕಗಳಿಂದ ನಾಗರಿಕರು ಯಾವುದೇ ಸಮಯದಲ್ಲಿಯೂ ಪಡೆಯಬಹುದಾಗಿತ್ತು. ಇದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಡಲಾಗಿತ್ತು. ವರ್ಷಗಳು ಕಳೆಯುತ್ತಿದ್ದಂತೆ, ೨ ರೂ. ಇದ್ದ ಹಣವನ್ನು ೫ ರೂ. ಗಳಿಗೆ ಏರಿಕೆ ಮಾಡಿ ೨೦ ಲೀ. ನೀರನ್ನು ನೀಡಲಾಗುತ್ತಿತ್ತು. ಇದರಿಂದ ಸಾವಿರಾರು ನಾಗರಿಕರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಪ್ರತಿ ಪಂಚಾಯಿತಿಗಳ ಘಟಕಗಳಿಂದ ಲಭಿಸುತ್ತಿತ್ತು.

ಆದರೆ, ಇದೀಗ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಹಲವು ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ. ಇದರಲ್ಲಿ ಪ್ರಮುಖವಾಗಿ ವಾಣಿಜ್ಯ ನಗರ ಗೋಣಿಕೊಪ್ಪ ಹಾಗೂ ಅರುವತ್ತೋಕ್ಲು ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ದುರಸ್ಥಿಯಲ್ಲಿದ್ದು ನಾಗರಿಕರು ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.

ಸರ್ಕಾರ ನೀಡಿರುವ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ೨ ಪಂಚಾಯಿತಿಗಳು ವಿಫಲವಾಗಿದ್ದು, ಸಣ್ಣಪುಟ್ಟ ಸಬೂಬುಗಳನ್ನು ಹೇಳುತ್ತಾ ದಿನ ಕಳೆಯುತ್ತಿವೆ.

(ಮೊದಲ ಪುಟದಿಂದ) ಖಾಸಗಿ ಸಂಸ್ಥೆಯು ನಿರ್ವಹಣೆ ಮಾಡುತ್ತಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಳೆದ ಆರು ತಿಂಗಳ ಹಿಂದೆ ಸಂಸ್ಥೆಯು ಆಯಾಯ ಪಂಚಾಯಿತಿಗೆ ಹಸ್ತಾಂತರ ಮಾಡಿದೆ. ನಂತರದ ದಿನಗಳಲ್ಲಿ ಈ ಘಟಕಕ್ಕೆ ಒಂದಲ್ಲವೊAದು ಸಮಸ್ಯೆ ಎದುರಾಗುತ್ತಿದೆ. ತಿಂಗಳಲ್ಲಿ ಕೇವಲ ಒಂದು ವಾರಗಳಷ್ಟೆ ಈ ಘಟಕವು ಚಾಲ್ತಿಯಲ್ಲಿರುತ್ತವೆ. ಉಳಿದ ದಿನಗಳಲ್ಲಿ ಘಟಕದ ಯಂತ್ರೋಪಕರಣಗಳು ಸದಾ ದುಸ್ಥಿತಿಯಲ್ಲಿರುತ್ತವೆ. ಇದರ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಪಂಚಾಯಿತಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಸರ್ಕಾರ ಒದಗಿಸಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವು ಪ್ರದರ್ಶನದ ವಸ್ತುವಾಗಿ ಕೊಠಡಿಯಲ್ಲಿ ಕೊಳೆಯುತ್ತಿದೆ.

ಕಳೆದ ಆರು ತಿಂಗಳ ಹಿಂದೆ ಘಟಕದ ಜವಾಬ್ದಾರಿಯನ್ನು ಸಂಬAಧಿಸಿದ ಇಲಾಖೆಯ ಮೂಲಕ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ನಂತರದ ದಿನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಘಟಕ ಕೆಟ್ಟು ಹೋಗಿದೆ. ಇದೀಗ ಕಳೆದ ಒಂದು ತಿಂಗಳಿನಿAದ ಕಾರ್ಯ ನಿರ್ವಹಿಸುತ್ತಿಲ್ಲ ಈ ಬಗ್ಗೆ ಈ ಹಿಂದೆ ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಅರುವತ್ತೋಕ್ಲು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶಂಕರ್ ನಾರಾಯಣ್ ತಿಳಿಸಿದ್ದಾರೆ.

ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕಾರು ನಿಲ್ದಾಣದ ಬಳಿ ಘಟಕವು ನಿರ್ಮಾಣವಾಗಿದೆ. ಅರುವತ್ತೋಕ್ಲು ಪಂಚಾಯಿತಿ ಕಚೇರಿಯ ಬಳಿಯೇ ಈ ಘಟಕವು ಕಾರ್ಯ ನಿರ್ವಹಿಸುತ್ತಿತ್ತು. ೨೦೧೪ರಲ್ಲಿ ಸರ್ಕಾರವು ಮಹತ್ವಕಾಂಕ್ಷಿ ಯೋಜನೆಯಾದ ಶುದ್ಧೀಕರಿಸಿದ ಕುಡಿಯುವ ನೀರನ್ನು ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಒದಗಿಸಲು ಕಾರ್ಯಕ್ರಮ ಜಾರಿಗೊಳಿಸಿತ್ತು. ಇದೀಗ ಸ್ಥಳೀಯ ಪಂಚಾಯಿತಿಯ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.