ಕೊಡ್ಲಿಪೇಟೆ, ಫೆ. ೨೨: ಇಲ್ಲಿನ ಜೈ ಭೀಮ್ ಸಂಘದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ರೈನ್ ಬೋ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕೊಡ್ಲಿಪೇಟೆ ಹೋಬಳಿ ಮಟ್ಟದ ಆಟಗಾರರನ್ನೊಳಗೊಂಡ ಪ್ರಾಂಚೈಸಿಗಳ ಸಹಭಾಗಿತ್ವದಲ್ಲಿ ೧೦ ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದವು. ಫೈನಲ್ ಪಂದ್ಯದಲ್ಲಿ ಪವರ್ ಹಿಟ್ಟರ್ಸ್ ತಂಡವನ್ನು ಮಣಿಸಿದ ರೈನ್ಬೋ ತಂಡ ಪ್ರಥಮ ಸ್ಥಾನ ಗಳಿಸಿತು.
ಸೆಮಿಫೈನಲ್ನಲ್ಲಿ ರೈನ್ ಬೋ ತಂಡವು ಎದುರಾಳಿ ಜೈ ಭೀಮ್ ತಂಡವನ್ನು ಮಣಿಸಿ ಫೈನಲ್ಗೇರಿದರೆ, ಎರಡನೇ ಸೆಮಿಫೈನಲ್ ಟೂ ಬ್ರದರ್ಸ್ ತಂಡವನ್ನು ಪವರ್ ಹಿಟ್ಟರ್ಸ್ ತಂಡ ಮಣಿಸಿ ಫೈನಲ್ ಪ್ರವೇಶಿಸಿತ್ತು.
ವಿಜೇತ ತಂಡಗಳಿಗೆ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಯಿತು. ವೈಯಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿ ವಿತರಿಸಲಾಯಿತು.
ಜೈ ಭೀಮ್ ಸಂಘದ ಅಧ್ಯಕ್ಷ ಡಿ.ಹೆಚ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಡಾ. ಮಂಥರ್ ಗೌಡ ಭಾಗಿಯಾಗಿ ಬಹುಮಾನ ವಿತರಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಔರಂಗಜೇಬ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ದನ್, ಗ್ರಾ.ಪಂ. ಸದಸ್ಯರಾದ ಹನೀಫ್ ಕಿರಿಕೊಡ್ಲಿ, ಪ್ರಸನ್ನ, ಅಶ್ವಿನಿ ಮಂಜುನಾಥ್, ಕವಿತಾ ಗಂಗಾಧರ್, ಕೆ.ಎಂ. ವಹಾಬ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.