ಪೊನ್ನಂಪೇಟೆ, ಫೆ. ೨೨: ಕರಿಮೆಣಸು ಕುಯ್ಯುವ ಸಂದರ್ಭ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ.
ಶ್ರೀಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದಲ್ಲಿ ವಿದ್ಯುತ್ ತಂತಿಗೆ ಅಲ್ಯುಮಿನಿಯಂ ಏಣಿ ತಗುಲಿ ಅಸ್ಸಾಂ ಮೂಲದ ಕಾರ್ಮಿಕ ಸಾವನಪ್ಪಿರುವ ದುರ್ಘಟನೆ ನಡೆದಿದೆ. ಇಸ್ಮಾಯಿಲ್ ಹುಸೇನ್ (೩೨) ಎಂಬವನೇ ಮೃತ ದುರ್ದೈವಿಯಾಗಿದ್ದು, ಈತ ಹೈಸೊಡ್ಲೂರು ಗ್ರಾಮದ ಮಹಾಬಲ ಎಂಬವರ ಲೈನ್ ಮನೆಯಲ್ಲಿ ಕಳೆದ ೪ ವರ್ಷಗಳಿಂದ ತನ್ನ ಕುಟುಂಬದೊAದಿಗೆ ವಾಸವಾಗಿದ್ದ.
ಇಂದು ತೋಟದಲ್ಲಿ ಕರಿ ಮೆಣಸು ಕುಯ್ಯುವ ಕೆಲಸ ನಿರ್ವಹಿಸಿ ನಂತರ ಬಾಳೆ ಗೊನೆ ಕಡಿಯಲು, ಬಾಳೆ ಗಿಡದ ಸಮೀಪದ ಮರಕ್ಕೆ ಅಲ್ಯೂಮಿನಿಯಂ ಏಣಿಯನ್ನು ಇಡುವ ಸಂದರ್ಭ ಏಣಿ ವಿದ್ಯುತ್ ತಂತಿಗೆ ತಗುಲಿ, ವಿದ್ಯುತ್ ಸ್ಪರ್ಶದಿಂದ ನೆಲಕ್ಕೆ ಬಿದ್ದಿದ್ದಾನೆ. ನಂತರ ಈತನನ್ನು ಗೋಣಿಕೊಪ್ಪ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಠಾಣಾಧಿಕಾರಿ ವಿರೂಪಾಕ್ಷ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಲ್ಕೇರಿ : ಮತ್ತೊಂದು ಘಟನೆ ಶ್ರೀಮಂಗಲ ಹೋಬಳಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದ್ದು ಅಸ್ಸಾಂ ಮೂಲದ ಕಾರ್ಮಿಕ ಅಬ್ರುದ್ದೀನ್ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ. ವಿನಯ್ ಎಂಬವರ ತೋಟದಲ್ಲಿ ಕರಿಮೆಣಸು ಕುಯ್ಯುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಅಲ್ಯುಮಿನಿಯಂ ಏಣಿ ಸ್ಪರ್ಶಗೊಂಡು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕಾರ್ಮಿಕ ಮೃತಪಟ್ಟಿದ್ದಾನೆ. ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.