ಮಡಿಕೇರಿ, ಫೆ. ೨೩: ಪೊನ್ನಂಪೇಟೆ ತಾಲೂಕಿನ ತಿತಿಮತಿ, ನಿಟ್ಟೂರು, ಗೋಣಿಕೊಪ್ಪಲು ಹಾಗೂ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ಈಗಾಗಲೇ ನಿಗದಿಯಾಗಿದೆ. ಎಮ್ಮೆಮಾಡು ಮತ್ತು ತಿತಿಮತಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸ್ವೀಕೃತವಾಗದೇ ಇರುವುದ ರಿಂದ ಆ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಇರುವುದಿಲ್ಲ.
ಆದ್ದರಿಂದ ತಿತಿಮತಿ ಮತ್ತು ಎಮ್ಮೆಮಾಡು ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಚುನಾವಣೆ ನಡೆಯಲಿರುವ ನಿಟ್ಟೂರು ಮತ್ತು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾ.೨೩ರ ಸಂಜೆ ೫ ಗಂಟೆಯಿAದ ತಾ. ೨೫ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯಗಳ
(ಮೊದಲ ಪುಟದಿಂದ) ಮಾರಾಟವನ್ನು ನಿಷೇಧಿಸಲಾಗಿದೆ.ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಕೀಯನ್ನು ಅಧಿಕಾರ ವ್ಯಾಪ್ತಿಯುಳ್ಳ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರಿಗೆ ಒಪ್ಪಿಸಬೇಕು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ವಶಕ್ಕೆ ಪಡೆಯಲಾಗುವುದು.
ಬಂದೂಕು ಠೇವಣಿ
ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಂದೂಕು ಪರವಾನಗಿದಾರರು ಅವರು ಹೊಂದಿರುವ ಬಂದೂಕು, ರಿವಾಲ್ವರ್ಗಳನ್ನು ಹಾಗೂ ವಿನಾಯಿತಿ ಪತ್ರ ಹೊಂದಿರುವವರ ಪೈಕಿ ಕ್ರಿಮಿನಲ್/ ರೌಡಿಶೀಟರ್/ ಕೋಮು ಗಲಭೆ ಹಿನ್ನೆಲೆಯುಳ್ಳ, ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವ್ಯಕ್ತಿ ಅಥವಾ ಈ ಹಿಂದಿನ ಚುನಾವಣಾ ಸಂದರ್ಭಗಳಲ್ಲಿ ಬಂದೂಕುಗಳನ್ನು ದುರ್ಬಳಕೆ ಮಾಡಿದ ಹಿನ್ನೆಲೆಯುಳ್ಳ ವ್ಯಕ್ತಿಗಳು ಹೊಂದಿರುವ ಬಂದೂಕುಗಳನ್ನು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಬೇಕು.
ಚುನಾವಣಾ ಫಲಿತಾಂಶ ಘೋಷಣೆಯಾಗುವವರೆಗೆ ಯಾವುದೇ ವ್ಯಕ್ತಿ ಬಂದೂಕುಗಳನ್ನು ಪ್ರದರ್ಶಿಸುವುದು, ಹಿಡಿದುಕೊಂಡು ಓಡಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.