ಕಣಿವೆ, ಫೆ. ೨೨: ಆಡಳಿತಾತ್ಮಕವಾದ ಕೆಲವು ಬೆಳವಣಿಗೆ ಹಾಗೂ ಬದಲಾವಣೆಯೊಂದಿಗೆ ಪುರಸಭೆಗೆ ವಿಲೀನಗೊಂಡ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮುಚ್ಚಿದ್ದರೂ ಸೌಲಭ್ಯಗಳಿಗಾಗಿ ಜನ ದಿನವೂ ಬರುತ್ತಲಿದ್ದಾರೆ.

ಆದರೆ ಪಂಚಾಯಿತಿ ಕಟ್ಟಡದಲ್ಲಿನ ಗ್ರಂಥಾಲಯ ದಿನವೂ ತೆರೆದಿದ್ದರೂ ಕೂಡ ಯಾರೊಬ್ಬರೂ ಬರುತ್ತಿಲ್ಲ. ಅಷ್ಟೇ ಅಲ್ಲ. ಪುರಸಭೆಗೆ ಮುಳ್ಳುಸೋಗೆ ವಿಲೀನವಾದ ಬಳಿಕ ಕಳೆದ ಮೂರು ತಿಂಗಳಿAದ ಪಂಚಾಯಿತಿಯ ಗ್ರಂಥಪಾಲಕಿಗೆ ವೇತನವೇ ಪಾವತಿಯಾಗಿಲ್ಲ. ಅಷ್ಟೇ ಅಲ್ಲ, ಕುಶಾಲನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ವಿದ್ಯುತ್ ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಈ ಬಗ್ಗೆ ಕುಶಾಲನಗರ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮುಳ್ಳುಸೋಗೆಯ ಈ ಸಮಸ್ಯೆಗಳತ್ತ ಗಮನ ಹರಿಸಿ ಪರಿಹರಿಸಬೇಕಿದೆ. ಅಷ್ಟೇ ಅಲ್ಲದೇ ತಮ್ಮ ವಿವಿಧ ಸಮಸ್ಯೆ ಹಾಗೂ ಬೇಡಿಕೆಗಳಿಗಾಗಿ ಮುಳ್ಳುಸೋಗೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕುಶಾಲನಗರದ ಪುರಸಭೆಗೆ ಭೇಟಿ ನೀಡಿದಾಗ ಈ ಜನರ ಅಹವಾಲನ್ನು ಕೇಳುವವರೇ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಆದ್ದರಿಂದ ಪುರಸಭೆಯಲ್ಲಿ ಪ್ರತ್ಯೇಕವಾಗಿ ಮುಳ್ಳುಸೋಗೆ ವ್ಯಾಪ್ತಿಯ ಸಾರ್ವಜನಿಕರಿಗೆಂದೇ ಪ್ರತ್ಯೇಕವಾದ ಸಮಸ್ಯೆ ಆಲಿಕೆ ಹಾಗೂ ಪರಿಹಾರ ಕೇಂದ್ರವನ್ನು ತೆರೆದು ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಿಸಬೇಕು. ಈ ಬಗ್ಗೆ ಪುರಸಭೆಯ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಬೇಕೆಂದು ಮುಳ್ಳುಸೋಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಚೆಲುವರಾಜು, ಎಂ.ಎ. ಕುಮಾರಸ್ವಾಮಿ, ಎಂ.ಎಸ್. ಶಿವಾನಂದ, ಎಂ.ಎಸ್. ರಾಜೇಶ್ ಮೊದಲಾದವರು ಒತ್ತಾಯಿಸಿದ್ದಾರೆ.