ಮಡಿಕೇರಿ, ಫೆ. ೨೧: ಇಷ್ಟು ದಿನ ಕಾಲ ಅದು ಕಾಡು ಪ್ರದೇಶದಿಂದ ಕೂಡಿದ ಸ್ಥಳವಾಗಿತ್ತು. ಅಪರೂಪಕ್ಕೊಮ್ಮೆ ಮಾತ್ರ ಒಂದಷ್ಟು ಪ್ರದೇಶವನ್ನು ಸ್ವಚ್ಛಗೊಳಿಸಿ, ಕಾರ್ಯ ಮುಗಿದ ಬಳಿಕ ಆ ಸ್ಥಳವನ್ನು ಮರೆತು ಬಿಡುತ್ತಿದ್ದರು. ಮತ್ತೆ ಯಾರಿಗೂ ಬೇಡವಾಗಿ ಬಿಡುತ್ತಿದ್ದ ಸುಂದರ ಸ್ಥಳ ಅದು. ಆದರೆ ಈಗ ಆ ಸ್ಥಳಕ್ಕೆ ಹೊಸ ಕಳೆ ಬಂದಿದೆ. ಮುಂದೆ ಮತ್ತಷ್ಟು ಹೊಸತನಕ್ಕಾಗಿ ತೆರೆದುಕೊಳ್ಳುವ ಸ್ಥಳವಾಗಿ ಮಾರ್ಪಾಡಾಗಿದೆ.

ಮಡಿಕೇರಿಯಲ್ಲಿರುವ ಬಂಟರ ಶಾಂತಿ ಧಾಮ(ಬಂಟರ ರುದ್ರ ಭೂಮಿ). ಸ್ಟೋನ್ ಹಿಲ್ ಬಳಿ ಬಂಟ ಸಮಾಜದ ಸ್ಮಶಾನವಾಗಿ ಅರ್ಧ ಎಕರೆಯಷ್ಟು ಜಾಗವಿದೆ. ದಶಕದ ಹಿಂದೆ ಇಲ್ಲಿ ಅಂತ್ಯಕ್ರಿಯೆಗಾಗಿ ಸೂಕ್ತ ವ್ಯವಸ್ಥೆಯನ್ನು ದಾನಿಗಳ ನೆರವಿನಿಂದ ಮಾಡಲಾಗಿತ್ತು. ಆದರೆ ನಂತರದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಪಾಲು ಜಾಗವಾಗಿ ಮಾರ್ಪಾಡಾಗಿತ್ತು. ಸಮಾಜದಲ್ಲಿ ಯಾರದ್ದಾದರೂ ಸಾವು ಸಂಭವಿಸಿದಾಗ ಮಾತ್ರ ಬಂದು ಅಂತ್ಯಕ್ರಿಯೆ ಮಾಡಿ ಹೋಗುತ್ತಿದ್ದದ್ದು ಬಿಟ್ಟರೆ ನಂತರದಲ್ಲಿ ಅದರ ನಿರ್ವಹಣೆಯತ್ತ ಸೂಕ್ತ ಚಿತ್ತ ಹರಿಸುತ್ತಿರಲಿಲ್ಲ.

ಇತ್ತೀಚೆಗೆ ಕೊಡಗು ಜಿಲ್ಲಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಡಿಕೇರಿಯ ಉದ್ಯಮಿ ಬಿ.ಡಿ. ಜಗದೀಶ್ ರೈ ಈ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ತಾವೇ ಸ್ವಂತ ಖರ್ಚಿನಲ್ಲಿ ಕಾಮಗಾರಿ ನಡೆಸಲು ಮುಂದೆ ಬಂದರು.

ಈ ಬಗ್ಗೆ ಸಂಘ ಹಾಗೂ ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ಫೆ.೧೩ ಸೋಮವಾರ ಶಾಂತಿ ಧಾಮ ಅಭಿವೃದ್ಧಿ ಕಾರ್ಯಕ್ಕೆ ಚಾಲನೆಯನ್ನೂ ನೀಡಿದರು. ಜೆ.ಸಿ.ಬಿ ಹಾಗೂ ಹಿಟಾಚಿ ಯಂತ್ರವನ್ನು ಬಳಸಿಕೊಂಡು ಆ ಜಾಗದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ತೆರೆವುಗೊಳಿಸಿ, ಮಣ್ಣು ಸಮತಟ್ಟು ಮಾಡಲಾಗಿದೆ. ಸತತ ೯ ದಿನ ಕಾಲ ನಡೆದ ನವೀಕರಣ ಕಾರ್ಯದಲ್ಲಿ ಎತ್ತರ ತಗ್ಗಿನಿಂದ ಕೂಡಿದ್ದ ಪ್ರದೇಶವನ್ನು ಸಮತಟ್ಟು ಮಾಡಲಾಗಿದೆ. ತಗಡಿನ ಶೀಟ್‌ಗಳನ್ನು ಬಳಸಿ ಮಣ್ಣು ಸವಕಳಿ ಆಗದಂತೆ ಅಗತ್ಯ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ.

ಸಿಲಿಕಾನ್ ಚೇಂಬರ್ ಅಳವಡಿಕೆ : ಇಲ್ಲಿನ ಚಿತಾಗಾರದಲ್ಲಿ ದಶಕದಷ್ಟು ಹಳೆಯದಾದ ಶವ ಸುಡುವ ಕಬ್ಬಿಣ ಪರಿಕರವಿತ್ತು. ಅದನ್ನು ತೆರವುಗೊಳಿಸಿ ಸಿಲಿಕಾನ್ ಚೇಂಬರ್ ಅಳವಡಿಸಲಾಗಿದೆ. ೧.೮೦ ಲಕ್ಷ ರೂ. ಮೊತ್ತದ ಒಲೆಯನ್ನು ತುಮಕೂರಿನಿಂದ ತರಿಸಲಾಗಿದೆ. ಜತೆಗೆ ಚಿತಾಗಾರದ ಕಟ್ಟಡಕ್ಕೆ ಸುಣ್ಣ ಬಣ್ಣವನ್ನೂ ಬಳಿಯಲಾಗಿದೆ. ಸಮಾಜದ ಪದಾಧಿಕಾರಿಗಳು, ಸದಸ್ಯರೂ ಕೂಡಾ ಈ ಕೆಲಸದಲ್ಲಿ ತಮ್ಮನ್ನು ಸೇರ್ಪಡೆಗೊಳಿಸಿಕೊಂಡರು.

ಗಿಡ ನೆಡುವ ಯೋಜನೆ : ಶಾಂತಿ ಧಾಮದಲ್ಲಿ ಅಂತ್ಯಕ್ರಿಯೆ ಮತ್ತು ನಂತರದ ವಿಧಿ ವಿಧಾನಗಳಿಗೆ ಅಗತ್ಯವಿರುವ ಜಾಗವನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಗಿಡ ನೆಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಮುಖ್ಯವಾಗಿ ನೆರಳಿನ ಗಿಡ, ಪ್ರಾಣಿ ಪಕ್ಷಿಗಳಿಗೆ ಆಹಾರವಾಗುವಂಥ ಹಣ್ಣಿನ ಗಿಡಗಳು, ಅಲಂಕಾರಿಕ ಹೂವಿನ ಗಿಡಗಳನ್ನು ನೆಟ್ಟು ಈ ಪರಿಸರವನ್ನು ಜನ ಸ್ನೇಹಿಯಾಗಿಸುವ ಪರಿಕಲ್ಪನೆಯನ್ನು ಜಗದೀಶ್ ರೈ ಹಾಗೂ ಬಳಗ ಹೊಂದಿದೆ. ಈ ಸಂಬAಧ ಉತ್ತಮ ಗಿಡಗಳನ್ನು ನೀಡಲು ಸಮಾಜದ ಅನೇಕರು ಮುಂದೆ ಬಂದಿದ್ದಾರೆ. ಮುಂದೆ ಮಳೆಗಾಲದ ಸಮಯದಲ್ಲಿ ಅದನ್ನು ಕಾರ್ಯಗತಗೊಳಿಸಲಾಗುವುದೆಂದು ಎಂದು ಹೇಳುತ್ತಾರೆ. ನವೀಕರಣ ಕಾರ್ಯಕ್ಕೆ ೪ ಲಕ್ಷ ರೂಪಾಯಿಗೂ ಅಧಿಕ ಖರ್ಚಾಗಿದೆ.

ನೀರಿನ ವ್ಯವಸ್ಥೆ : ಶಾಂತಿ ಧಾಮಕ್ಕೆ ಅಗತ್ಯವಿರುವ ನೀರಿನ ಸೌಕರ್ಯ ಒದಗಿಸುವ ಜವಾಬ್ದಾರಿಯನ್ನು ನಗರಸಭೆ ಸದಸ್ಯ ಅರುಣ್ ಶೆಟ್ಟಿ ವಹಿಸಿಕೊಂಡಿದ್ದರು. ನಗರಸಭೆ ನೆರವಿನಿಂದ ನೀರಿನ ಟ್ಯಾಂಕ್ ಅನ್ನೂ ಅಳವಡಿಸಲಾಗಿದೆ. ಈ ಮೊದಲು ಅಂತ್ಯಕ್ರಿಯೆ ವೇಳೆ ವಿಧಿ ವಿಧಾನ ನೆರವೇರಿಸಲು ಹಾಗೂ ಇನ್ನಿತರೆ ಕಾರ್ಯಗಳಿಗೆ ಮನೆಯಿಂದ ನೀರು ತರಬೇಕಾದ ಸ್ಥಿತಿ ಇತ್ತು. ಆದರೆ ಇನ್ನು ಮುಂದೆ ಆ ಸಮಸ್ಯೆ ದೂರವಾಗಲಿದೆ.

ನಮ್ಮ ಸಂಸ್ಕೃತಿಯಲ್ಲಿ ಹುಟ್ಟು ಮತ್ತು ಸಾವು ಈ ಎರಡಕ್ಕೂ ಅದರದ್ದೇ ಆದ ಮಹತ್ವವಿದೆ. ಯಾರಾದರು ತೀರಿಕೊಂಡಾಗ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಬೇಕು. ಆ ನಿಟ್ಟಿನಲ್ಲಿ ಅಂತ್ಯ ಸಂಸ್ಕಾರದ ಜಾಗವೂ ಉತ್ತಮವಾಗಿ ಇರಬೇಕೆಂಬ ಕಲ್ಪನೆಯಲ್ಲಿ ಮೊದಲ ಕಾರ್ಯವಾಗಿ ಇದನ್ನು ನವೀಕರಣ ಮಾಡಿದ್ದೇನೆ ಎಂದು ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಹರ್ಷ ವ್ಯಕ್ತಪಡಿಸಿದ್ದಾರೆ.