ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ, ಫೆ. ೨೨: ಏಕನಾಥ್ ಶಿಂಧೆ ಬಣವನ್ನು ಅಧಿಕೃತ ಶಿವಸೇನೆ ಎಂದು ಗುರುತಿಸಿರುವ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ೩ ನ್ಯಾಯಾಧೀಶರ ಪೀಠ, ಚುನಾವಣಾ ಆಯೋಗಕ್ಕೆ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಆದಾಗ್ಯೂ, ನ್ಯಾಯ ಪೀಠವು ಉದ್ಧವ್ ಠಾಕ್ರೆ ಗುಂಪಿನ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹೆಸರು ಮತ್ತು ಚಿಹ್ನೆ ಟಾರ್ಚ್ ಅನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಫೆಬ್ರವರಿ ೨೬ರಂದು ನಡೆಯಲಿರುವ ಮಹಾರಾಷ್ಟç ವಿಧಾನಸಭಾ ಉಪಚುನಾವಣೆ ದೃಷ್ಟಿಯಿಂದ ಇಸಿಐ ಮಧ್ಯಂತರ ವ್ಯವಸ್ಥೆಗೆ ಅನುಮತಿ ನೀಡಿತ್ತು. ನಿಮ್ಮ ಮತ್ತು ಇತರ ಕಡೆಯ ವಾದವನ್ನು ಆಲಿಸದೆ ನಾವು ಯಾವುದೇ ನಿರ್ಧಾರವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅದೇನೆಂದರೆ, ಶಿವಸೇನೆಯ ಚಿಹ್ನೆ ಮತ್ತು ಹೆಸರನ್ನು ಬಳಸುವ ಹಕ್ಕು ಸದ್ಯಕ್ಕೆ ಏಕನಾಥ್ ಶಿಂಧೆ ಬಣಕ್ಕೆ ಇರುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗ ಮತ್ತು ಶಿಂಧೆ ಬಣಕ್ಕೆ ನೋಟಿಸ್ ಜಾರಿ ಮಾಡಿದ್ದು, ಈ ವಿಚಾರದಲ್ಲಿ ಉತ್ತರ ಕೇಳಿದೆ. ಎರಡು ವಾರಗಳ ನಂತರ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ. ಒಂದೆಡೆ ನ್ಯಾಯಾಲಯದ ಈ ನಿರ್ಧಾರ ಶಿಂಧೆ ಗುಂಪಿಗೆ ಬಿಗ್ ರಿಲೀಫ್ ಆಗಿದ್ದರೆ, ಮತ್ತೊಂದೆಡೆ ಉದ್ಧವ್ ಠಾಕ್ರೆಗೆ ಮತ್ತೊಮ್ಮೆ ನಿರಾಸೆ ಮೂಡಿಸಲಿದೆ.

ಹಿಜಾಬ್ : ವಿಚಾರಣೆ ಕೈಗೆತ್ತಿಕೊಳ್ಳಲು ತೀರ್ಮಾನ

ನವದೆಹಲಿ, ಫೆ. ೨೨: ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ. ಶಾಲೆಯ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ವಿಷಯದ ಕುರಿತು ಈ ಹಿಂದೆ ಸುಪ್ರೀಂ ಕೋರ್ಟ್ ಭಿನ್ನ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿಕೊಂಡು ಬಂದರೆ ವಿದ್ಯಾರ್ಥಿನಿಯರಿಗೆ ಮಾರ್ಚ್ ೯ ರಿಂದ ಪ್ರಾರಂಭವಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಲಾಯಿತು. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹೋದರೆ ಅವರನ್ನು ಪರೀಕ್ಷಾ ಹಾಲ್ ಒಳಗೆ ಕುಳಿತುಕೊಳ್ಳಲು, ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ವಿದ್ಯಾರ್ಥಿಗಳಿಗೆ ಸದ್ಯದಲ್ಲಿಯೇ ಪರೀಕ್ಷೆ ಇರುವುದರಿಂದ ಮುಂದಿನ ಸೋಮವಾರ ಅಥವಾ ಶುಕ್ರವಾರದಂದು ವಿಚಾರಣೆ ನಡೆಸಲು ನ್ಯಾಯಾಲಯವು ಪರಿಗಣಿಸಬಹುದು ಎಂದು ವಕೀಲ ಶಾದನ್ ಫರಾಸತ್ ಹೇಳಿದರು.

ಏಪ್ರಿಲ್ ೧ ರಿಂದ ಜಮ್ಮು-ಕಾಶ್ಮೀರದಲ್ಲಿ ಆಸ್ತಿ ತೆರಿಗೆ ಜಾರಿ

ನವದೆಹಲಿ, ಫೆ. ೨೨: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಆರ್ಟಿಕಲ್ ೩೭೦ ರದ್ದುಗೊಳಿಸಿದ ೩ ವರ್ಷಗಳ ಬಳಿಕ ಏ. ೧ ರಿಂದ ಆಸ್ತಿ ತೆರಿಗೆ ವಿಧಿಸುವುದು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬರುತ್ತಿದೆ. ಆಸ್ತಿ ತೆರಿಗೆ ವಿಧಿಸುವ ನಿರ್ಧಾರವನ್ನು ಜಮ್ಮು-ಕಾಶ್ಮೀರ ಆಡಳಿತ ತೆಗೆದುಕೊಂಡಿದೆ. ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಇಂದು ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಘೋಷಿಸಿದ್ದು, ಕೇಂದ್ರಾಡಳಿತ ಪ್ರದೇಶದ ಪುರಸಭೆಗಳು ಮತ್ತು ಮುನ್ಸಿಪಲ್ ಕೌನ್ಸಿಲ್‌ಗಳಲ್ಲಿ ಜಾರಿಗೆ ಬರಲಿದೆ. ವಸತಿ ಹಾಗೂ ವಸತಿಯೇತರ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಬರುತ್ತಿದೆ. ಈ ಹಿಂದೆ ವಸತಿ ಆಸ್ತಿಗಳಿಗೆ ಸರ್ಕಾರ ವಿನಾಯಿತಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ವಸತಿ ಆಸ್ತಿಯೊಂದಕ್ಕೆ ಆಸ್ತಿ ತೆರಿಗೆಯನ್ನು, ತೆರಿಗೆ ವಿಧಿಸಬಹುದಾದ ವಾರ್ಷಿಕ ಮೌಲ್ಯ (ಟಿಎವಿ) ಯ ಶೇ.೫ ರಷ್ಟು ವಿಧಿಸಲಿದ್ದು, ವಸತಿಯಲ್ಲದ್ದಕ್ಕೆ ಶೇ.೬ ರಷ್ಟು ತೆರಿಗೆ ವಿಧಿಸಲಾಗುತ್ತದೆ.

ತೂಗು ಸೇತುವೆ ದುರಂತ : ೧೦ ಲಕ್ಷ ಮಧ್ಯಂತರ ಪರಿಹಾರಕ್ಕೆ ಆದೇಶ

ಅಹ್ಮದಾಬಾದ್, ಫೆ. ೨೨: ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗುಜರಾತ್‌ನ ಮೊರ್ಬಿ ತೂಗು ಸೇತುವೆ ದುರಂತಕ್ಕೆ ಸಂಬAಧಿಸಿದAತೆ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ದುರಂತದ ಸಂತ್ರಸ್ತರಿಗೆ ತಲಾ ೧೦ ಲಕ್ಷ ರೂ ಮಧ್ಯಂತರ ಪರಿಹಾರ ನೀಡುವಂತೆ ಆದೇಶಿಸಿದೆ. ಮೊರ್ಬಿ ತೂಗುಸೇತುವೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ ೧೦ ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ಎರಡು ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ಗಡಿಯಾರ ತಯಾರಕ ಒರೆವಾ ಗ್ರೂಪ್‌ಗೆ ಗುಜರಾತ್ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ ಈ ಪರಿಹಾರ ನೀಡಿಕೆಗೆ ಕೋರ್ಟ್ ನಾಲ್ಕು ವಾರಗಳ ಗಡುವು ಕೂಡ ನೀಡಿದೆ. ಸೇತುವೆಯ ನಿರ್ವಹಣೆಯ ಜವಾಬ್ದಾರಿಯನ್ನು ಇದೇ ಒರೆವಾ ಕಂಪೆನಿಯು ಹೊಂದಿತ್ತು. ಮುಖ್ಯ ನ್ಯಾಯಮೂರ್ತಿ ಸೋನಿಯಾ ಗೋಕನಿ ಮತ್ತು ನ್ಯಾಯಮೂರ್ತಿ ಸಂದೀಪ್ ಭಟ್ ಅವರ ಪೀಠವು ಮಧ್ಯಂತರ ಪರಿಹಾರವನ್ನು ನೀಡುವಂತೆ ಕಂಪೆನಿಗೆ ಸೂಚಿಸಿದೆ. ಮಧ್ಯಂತರ ಪರಿಹಾರವಾಗಿ ಗಾಯಾಳುಗಳಿಗೆ ತಲಾ ಎರಡು ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಆದೇಶಿಸಿದೆ. ಗುಜರಾತ್ ರಾಜ್ಯದ ಮೊರ್ಬಿ ಪಟ್ಟಣದ ಮಚ್ಚು ನದಿಯ ಮೇಲಿರುವ ತೂಗು ಸೇತುವೆ ಕಳೆದ ವರ್ಷ ಅಕ್ಟೋಬರ್ ೩೦ ರಂದು ಕುಸಿದಿತ್ತು. ಈ ಅವಘಡದಲ್ಲಿ ೧೩೫ ಮಂದಿ ಸಾವನ್ನಪ್ಪಿದ್ದು, ೫೬ ಮಂದಿ ಗಾಯಗೊಂಡಿದ್ದರು. ಮಂಗಳವಾರ, ಒರೆವಾ ಗ್ರೂಪ್ ಹೈಕೋರ್ಟಿನ ಮುಂದೆ ಒಟ್ಟು ಐದು ಕೋಟಿ ರೂಪಾಯಿಗಳನ್ನು ಮಧ್ಯಂತರ ಪರಿಹಾರವಾಗಿ ತಮ್ಮ ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರ ಮುಂದಿನ ಸಂಬAಧಿಕರಿಗೆ ಪಾವತಿಸಲು ಪ್ರಸ್ತಾಪವನ್ನು ಮಾಡಿತು. ಆದರೆ, ಕಂಪನಿ ನೀಡಿರುವ ಪರಿಹಾರ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಾವೋವಾದಿಗಳು ನಡೆಸಿದ ಸ್ಫೋಟದಲ್ಲಿ ಯುವಕ ಸಾವು

ರಾಂಚಿ, ಫೆ. ೨೨: ಪಶ್ಚಿಮ ಸಿಂಗ್‌ಭೂಮ್‌ನ ಮೆರಲ್‌ಗಡ ಗ್ರಾಮದ ಬಳಿ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ೨೩ ವರ್ಷದ ಯುವಕನೋರ್ವ ಸಾವನ್ನಪ್ಪಿದ್ದಾನೆ. ಗೋಯಿಲ್ಕೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಮೇರಲಗಡ ಗ್ರಾಮದ ಅರಣ್ಯದಲ್ಲಿ ಕಟ್ಟಿಗೆಗಳನ್ನು ಸಂಗ್ರಹಿಸಲು ಹೋದಾಗ ಈ ಘಟನೆ ನಡೆದಿದೆ. ಇದಕ್ಕೂ ಮೊದಲು, ೨೦೨೨ರ ಅಕ್ಟೋಬರ್-ನವೆಂಬರ್‌ನಲ್ಲಿ ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟಗಳಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಪೊಲೀಸರ ಪ್ರಕಾರ, ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಐಇಡಿ ಸ್ಫೋಟದಲ್ಲಿ ೨೩ ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಚೈಬಾಸಾ ಎಸ್‌ಪಿ ಅಶುತೋಷ್ ಶೇಖರ್ ಹೇಳಿದ್ದು ಇದೊಂದು ಹೇಡಿತನದ ಕೃತ್ಯ ಎಂದು ಹೇಳಿದ್ದಾರೆ.

ಕಳ್ಳತನಗೊಂಡಿದ್ದ ಬಸ್ ಪತ್ತೆ

ಕಲಬುರಗಿ, ಫೆ. ೨೨: ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳ್ಳತನವಾಗಿದ್ದ ಸರ್ಕಾರಿ ಬಸ್ ಅನ್ನು ೧೩ ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳ್ಳತನವಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಚಿಂಚೋಳಿ ಪೊಲೀಸರು ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂಕೈಲಾಸ ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆಂದು ತಿಳಿದುಬಂದಿದೆ. ಘಟನೆ ಬಳಿಕ ಪೊಲೀಸರು ಚಿಂಚೋಳಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಆದರೆ, ದೃಶ್ಯಾವಳಿಗಳು ಸ್ಪಷ್ಟವಾಗಿರಲಿಲ್ಲ. ಆದರೂ, ಇತರ ಮೂಲಗಳಿಂದ ವಿವರ ಸಂಗ್ರಹಿಸಿದ ಪೊಲೀಸ್ ಕಳ್ಳತನವಾದ ೧೩ ಗಂಟೆಗಳಲ್ಲೇ ಬಸ್‌ನ್ನು ಪತ್ತೆ ಮಾಡಿದ್ದಾರೆ. ತಾಂಡೂರಿಗೆ ತೆರಳಿದ ತಂಡಕ್ಕೆ ತಾಂಡೂರು ಬಳಿಯ ವೃತ್ತದಲ್ಲಿ ಬಸ್ ನಿಂತಿರುವುದು ಕಂಡು ಬಂದಿದೆ. ಇದೀಗ ಉಜ್ಜನಕೊಪ್ಪ ಪೊಲೀಸರು ಬಸ್ ಕಳ್ಳತನ ಮಾಡಿದ್ದ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅವರ ಬಂಧನದ ನಂತರವೇ ಬಸ್ ಕಳ್ಳತನದ ಉದ್ದೇಶ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.