ಸ್ಥಳ ನಿಯೋಜನೆ ಮಾಡದೆ ಡಿ. ರೂಪಾ ರೋಹಿಣಿ ಸಿಂಧೂರಿ ವರ್ಗಾವಣೆ

ಬೆಂಗಳೂರು, ಫೆ. ೨೧: ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕಿತ್ತಾಡಿಕೊಂಡು, ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ. ಡಿ. ರೂಪಾ ಅವರ ಪತಿ, ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನೂ ಸಹ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಆರ್)ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ನಿನ್ನೆಯಷ್ಟೇ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದ ಸರ್ಕಾರ, ಇಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಾಗೂ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಡಿ. ರೂಪಾ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ. ಮೌನೀಶ್ ಮೌದ್ಗಿಲ್ ಅವರ ವರ್ಗಾವಣೆಯಿಂದ ತೆರವಾದ ಸರ್ವೆ ಮತ್ತು ಲ್ಯಾಂಡ್ ರೆಕಾರ್ಡ್ ಇಲಾಖೆಯ ಆಯುಕ್ತರ ಹುದ್ದೆಗೆ ಅಲ್ಲಿಯೇ ಹೆಚ್ಚುವರಿ ನಿದೇಶಕರಾಗಿದ್ದ ಸಿ.ಎನ್. ಸುಧೀಂದ್ರ ಅವರನ್ನು ನೇಮಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಆಯಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರ ಸ್ಥಾನಕ್ಕೆ ಬಸವರಾಜೇಂದ್ರ ಹೆಚ್. ಅವರನ್ನು ನೇಮಕ ಮಾಡಲಾಗಿದ್ದು, ಡಿ. ರೂಪಾ ಅವರ ಸ್ಥಾನಕ್ಕೆ ಭಾರತಿ ಡಿ. ಎಂಬವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶ್ರೀಲಂಕಾದಲ್ಲಿ ಚುನಾವಣೆ ಮುಂದೂಡಿಕೆ

ಕೊಲAಬೋ, ಫೆ. ೨೧: ಆರ್ಥಿಕ ದಿವಾಳಿತನಕ್ಕೊಳಗಾಗಿರುವ ಶ್ರೀಲಂಕಾ, ಮತಪತ್ರಗಳ ಮುದ್ರಣಕ್ಕೆ ಹಣವಿಲ್ಲದೇ ಚುನಾವಣೆಯನ್ನು ಮುಂದೂಡಿದೆ. ಮುಂದಿನ ತಿಂಗಳು ನಿಗದಿಯಾಗಿದ್ದ ಸ್ಥಳೀಯ ಚುನಾವಣೆಯನ್ನು ಮುಂದೂಡಿರುವ ಕ್ರಮವನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದು, ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಯಿತು. ಮಾ. ೯ ರಂದು ನಡೆಯಬೇಕಿದ್ದ ಚುನಾವಣೆಯನ್ನು ಅಧ್ಯಕ್ಷ ರಣಿಲ್ ವಿಕ್ರಮಸಿಂಘೆ ಅವರಿಗೆ ಸತ್ವಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಶ್ರೀಲಂಕಾದ ಆರ್ಥಿಕ ಸ್ಥಿತಿ ತೀವ್ರ ಕುಸಿತ ಎದುರಿಸಿದ್ದಾಗ ಜುಲೈನಲ್ಲಿ ವಿಕ್ರಮಸಿಂಘೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣಾ ಆಯೋಗ ಕೋರ್ಟ್ಗೆ ನೀಡಿರುವ ಮಾಹಿತಿಯ ಪ್ರಕಾರ, ಮತಪತ್ರಗಳ ಮುದ್ರಣ, ಇಂಧನ ಅಥವಾ ಮತಗಟ್ಟೆಗಳಿಗೆ ಪೊಲೀಸ್ ರಕ್ಷಣೆಗೆ ಹಣವನ್ನು ಬಿಡುಗಡೆ ಮಾಡಲು ಖಜಾನೆ ನಿರಾಕರಿಸಿದೆ.

ಗೃಹ ಸಚಿವರಿಗೆ ಸಿದ್ದರಾಮಯ್ಯ ಸವಾಲು

ಬೆಂಗಳೂರು, ಫೆ. ೨೧: ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ. ಜಂಟಿ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ, ಸಚಿವ ಅಶ್ವಥ್ ನಾರಾಯಣ ಹೇಳಿಕೆಗೆ ಗುಡುಗಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದರು. ಯಾವ ಧರ್ಮವೂ ಕೂಡ ಕೊಲೆ ಮಾಡೋಕೆ ಹೇಳುವುದಿಲ್ಲ, ಯಾವ ಧರ್ಮವೂ ಕೂಡ ಹೊಡೆಯೋಕೆ, ಬಡಿಯೋಕೆ ಹೇಳುವುದಿಲ್ಲ, ಇದು ಬೌದ್ಧಿಕ ದಿವಾಳಿತನ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರು (ಅಶ್ವತ್ ನಾರಾಯಣ) ಆಡು ಭಾಷೆಯಲ್ಲಿ ಹೇಳಿದ್ದಾರೆ. ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ ಎಂದರು. ಅದನ್ನು ಬಿಟ್ಟು ಬಜೆಟ್ ಮೇಲೆ ಚರ್ಚೆ ಮಾಡಬೇಕು ಎಂದರು. ಜ್ಞಾನೇಂದ್ರ ಹೇಳಿಕೆಗೆ ಮುಗಿಬಿದ್ದ ಕಾಂಗ್ರೆಸ್ ಸದಸ್ಯರು, ಸೈದ್ಧಾಂತಿಕ ದಿವಾಳಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗೃಹ ಸಚಿವರು ದುರ್ಬಲರಾಗಿದ್ದಾರೆ ಎಂದರು. ಮಧ್ಯಪ್ರವೇಶಿಸಿದ ಜಾನೇಂದ್ರ, ನಾನು ಚಾಲೆಂಜ್ ಮಾಡ್ತೇನೆ, ನಿಮಗಿಂತ ಆಡಳಿತ ಚೆನ್ನಾಗಿ ಮಾಡಿದ್ದೇನೆ, ಚರ್ಚೆ ಮಾಡೋಣ ಎಂದರು. ನೀವು ಉತ್ತಮ ಗೃಹ ಮಂತ್ರಿಯಾಗಿದ್ದರೇ ಅಶ್ವತ್ಥ ನಾರಾಯಣ ವಿರುದ್ಧ ಸುಮೊಟೋ ಕೇಸ್ ದಾಖಲಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಯುನೆಸ್ಕೊ ಪಟ್ಟಿಗೆ ಬೇಲೂರು ಶ್ರೀ ಚೆನ್ನಕೇಶವ ದೇಗುಲ

ಬೇಲೂರು, ಫೆ. ೨೧: ಬೇಲೂರು ಶ್ರೀ ಚೆನ್ನಕೇಶವ ದೇಗುಲ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಅಧಿಕೃತ ಘೋಷಣೆಯಾದಲ್ಲಿ, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವಯುತ ಕೊಡುಗೆ ನೀಡುವುದಲ್ಲದೇ, ಬೇಲೂರು ಹಳೇಬೀಡು ಪ್ರದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು. ಅವರು ಇಂದು ಶ್ರೀ ಚೆನ್ನಕೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಬೇಲೂರು ಶ್ರೀ ಚೆನ್ನಕೇಶವ ದೇಗುಲ ಕರ್ನಾಟಕದ ಹೆಮ್ಮೆಯಾಗಿದ್ದು, ಇಲ್ಲಿನ ಶಿಲ್ಪಕಲೆ ವಿಶ್ವದೆಲ್ಲೆಡೆ ಪ್ರಸಿದ್ಧಿ ಹೊಂದಿದೆ. ಬೇಲೂರು ಶ್ರೀ ಚೆನ್ನಕೇಶವ ದೇಗುಲವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಂಬAಧಪಟ್ಟ ಇತಿಹಾಸ, ದಾಖಲೆಗಳನ್ನು ಈಗಾಗಲೇ ಸರ್ಕಾರ ಸಲ್ಲಿಸಿದೆ. ಕೆಲವೇ ತಿಂಗಳಲ್ಲಿ ಯುನೆಸ್ಕೊ ಪಟ್ಟಿಯಲ್ಲಿ ಸೇರುವ ಮೂಲಕ, ಈ ತಾಣದಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಜೊತೆಗೆ ಹೆಚ್ಚಿನ ಅನುದಾನ ದೊರೆಯಲಿದ್ದು, ದೇಶ ವಿದೇಶಗಳಿಂದ ಭೇಟಿ ನೀಡುವ ಪ್ರವಾಸಿಗರು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದರು.

ಸರಕಾರಿ ಬಸ್ ಕದ್ದ ಖದೀಮರು

ಕಲಬುರಗಿ, ಫೆ. ೨೧: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರಕಾರಿ ಬಸ್ ಅನ್ನು ಖತರ್ನಾಕ್ ಕಳ್ಳರು ಎಗರಿಸಿದ್ದಾರೆ, ಈ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ೩:೩೦ಕ್ಕೆ ನಡೆದಿದೆ. ತಡರಾತ್ರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಒಂದನ್ನು ಕಳ್ಳರು ನಸುಕಿನ ಜಾವ ೩.೩೦ರ ಸುಮಾರಿಗೆ ಕಳ್ಳತನ ಮಾಡಿರುವ ಘಟನೆ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೀದರ್ ನಂಬರ್ ೨ ಡಿಪೋಗೆ ಸೇರಿದ ಬಸ್ ಇದಾಗಿದೆ. ಕೆಎ ೩೮ ಎಫ್ ೯೭೧ ನಂಬರ್‌ನ ಬಸ್ ಕಳ್ಳತನ ಮಾಡಿದ ಕಳ್ಳರು, ಮಿರಿಯಾಣ ಮಾರ್ಗವಾಗಿ ತಾಂಡೂರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಬಸ್ ಹುಡುಕಾಟಕ್ಕೆ ಪೊಲೀಸರ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಎರಡು ಪೊಲೀಸ್ ತಂಡಗಳು ತೆಲಂಗಾಣದ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದೆ. ಸ್ಥಳಕ್ಕೆ ಚಿಂಚೋಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಾರ್ಚ್ ೧ ರಿಂದ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ

ಬೆಂಗಳೂರು, ಫೆ. ೨೧: ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ರಾಜ್ಯ ಬಜೆಟ್ ನಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಲೀಗ್ ಮಾರ್ಚ್ ೧ ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ. ರಾಜ್ಯ ಬಜೆಟ್‌ನಿಂದ ನಿರಾಶೆಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನೌಕರರ ಲೀಗ್ ಮಾರ್ಚ್ ೧ ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಫೆಬ್ರವರಿ ೧೭ ರಂದು ಮಂಡಿಸಿದ ಬಜೆಟ್‌ನಲ್ಲಿ ವೇತನ ಹೆಚ್ಚಳದ ಪ್ರಸ್ತಾವನೆಗಾಗಿ ನೌಕರರು ಕಾತರದಿಂದ ಕಾಯುತ್ತಿದ್ದರು. ಆದರೆ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ೩,೦೦೦ಕ್ಕೂ ಹೆಚ್ಚು ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘದ ನೇತೃತ್ವದ ನೌಕರರು, ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಸರಕಾರ ಶೀಘ್ರವೇ ವೇತನ ಹೆಚ್ಚಳವನ್ನು ಘೋಷಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ನೌಕರರು ಹೇಳಿದ್ದಾರೆ.